ಶಿವಮೊಗ್ಗ: ಜನ ಸಂಖ್ಯೆಗೆ ಅನುಗುಣವಾಗಿ ಎಸ್ಸಿ ಹಾಗೂ ಎಸ್ಟಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಹೆಚ್ಚಿಸುವಂತೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಆಯೋಗ ವರದಿ ನೀಡಿ ಎರಡು ವರ್ಷ ಕಳೆದರೂ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಜುಲೈ 11 ರಂದು ನಗರದ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಕರ್ನಾಟಕ ಸ್ವಾಭಿಮಾನಿ ಎಸ್ಸಿ, ಎಸ್ಟಿ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಎಂ. ಗುರುಮೂರ್ತಿ ತಿಳಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಸಿ ಮೀಸಲಾತಿಯನ್ನು ಶೇ.15 ರಿಂದ 17 ಕ್ಕೆ ಎಸ್ಟಿ ಮೀಸಲಾತಿಯನ್ನು ಶೇ.5 ರಿಂದ 7 ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ 2022 ರ ಫೆಬ್ರವರಿ 10 ರಿಂದ ಬೆಂಗಳೂರಿನಲ್ಲಿ ಅನಿರ್ಧಿಷ್ಟಾವಧಿಧರಣಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಇದಕ್ಕೆ ಕನಿಷ್ಠ ಸ್ಪಂದನೆಯನ್ನು ಮಾಡಿಲ್ಲ ಎಂದು ದೂರಿದರು. ಮೀಸಲಾತಿ ಜಾರಿಗೊಳಿಸಿದಾಗ ಶೇಕಡವಾರು ಪ್ರಮಾಣವನ್ನು ನಿಗದಿ ಮಾಡಲಾಗಿತ್ತು. ಆದರೆ ಈಗ ಜನಸಂಖ್ಯೆ ಹೆಚ್ಚಾಗಿ ಮೀಸಲಾತಿ ಕಡಿಮೆಯಾಗಿದೆ. ಇದರಿಂದಾಗಿ ಶಿಕ್ಷಣ ಹಾಗೂ ಉದ್ಯೋಗ ಪಡೆಯುವಲ್ಲಿ ಹಿನ್ನಡೆಯಾಗುತ್ತಿದೆ. ಇದರಿಂದಾಗಿ ಮೀಸಲಾತಿ ಹೆಚ್ಚಿಸುವಂತೆ ಹೋರಾಟ ಮಾಡುತ್ತಿದ್ದರೂ ಸರ್ಕಾರ ಏನನ್ನೂ ಹೇಳದೆ ವೌನವಾಗಿದೆ ಎಂದರು.
ಎಸ್ಸಿ ಪಟ್ಟಿಯಲ್ಲಿ 101 ಜಾತಿ ಎಸ್ಟಿ ಪಟ್ಟಿಯಲ್ಲಿ 50 ಜಾತಿಗಳನ್ನು ಗುರುತಿಸಲಾಗಿದೆ. 2011 ರ ಜನಗಣತಿ ಪ್ರಕಾಟ ಎಸ್ಸಿಗಳ ಜನಸಂಖ್ಯೆ 1,04,74,992, ಎಸ್ಟಿ ಗಳ ಜನಸಂಖ್ಯೆ 42,48,987 ರಷ್ಟಿದೆ. ರಾಜ್ಯದ ಒಟ್ಟಾರೆ ಜನ ಸಂಖ್ಯೆಯಲ್ಲಿ ಎಸ್ಸಿ ಶೇ.17 ಹಾಗೂ ಎಸ್ಟಿ ಜನ ಸಂಖ್ಯೆ ಶೇ.7.5 ರಷ್ಟಿದೆ. ಇದರಿಂದಾಗಿ ಈಗಿರುವ ಮೀಸಲಾತಿ ಸಾಕಾಗುತ್ತಿಲ್ಲ ಎಂದರು. ಎಸ್ಸಿ, ಎಸ್ಟಿ ಸಮುದಾಯದಡಿ ಬರುವ ಎಲ್ಲಾ ಸಂಘಟನೆಗಳ ಪ್ರಮುಖರು ಅಂದಿನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ ಅವರು, ಸರ್ಕಾರ ತಕ್ಷಣ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು. ಶ್ರೀಗಳು ನಡೆಸುತ್ತಿರುವ ಹೋರಾಟ ಆದಷ್ಟು ಬೇಗ ಅಂತ್ಯಗೊಳಿಸಲು ಸರ್ಕಾರದ ನಿರ್ಧಾರ ಅತೀ ಮುಖ್ಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೆಚ್ ಆರ್ ಹನುಮಂತಪ್ಪ, ಆರ್. ಲಕ್ಷ್ಮಣ್, ರವಿಕುಮಾರ್, ಶಿವಣ್ಣ, ವಾಲ್ಮೀಕಿ ಸಮಾಜದ ಮೋಹನ್, ಎಂ.ಎಸ್. ಬಸವರಾಜಪ್ಪ, ಬಿಎಸ್ಪಿ ಜಿಲ್ಲಾಧ್ಯಕ್ಷ ಎ.ಡಿ. ಶಿವಪ್ಪ, ತಿಮ್ಮರಾಜ್, ತಿಪ್ಪೇಸ್ವಾಮಿ, ಶೇಖರಪ್ಪ ಮತ್ತಿತರರು ಇದ್ದರು.