ಶಿವಮೊಗ್ಗ: ಸಂಸ್ಕೃತ ವಿದ್ಯಾರ್ಥಿಗಳು ಕೇವಲ ಶಾಸ್ತ್ರಾಧ್ಯಯನ ಮಾಡಿದರೆ ಸಾಲದು ಸಾಹಸ ಚಟುವಟಿಕೆಗಳಲ್ಲೂ ಭಾಗವಹಿಸಬೇಕು ಎಂದು ಸಂಸ್ಕೃತ ಭಾರತಿ ಕರ್ನಾಟಕ ದಕ್ಷಿಣ ಪ್ರಾಂತದ ಅಧ್ಯಕ್ಷ ಟಿ.ಎನ್.ಪ್ರಭಾಕರ್ ತಿಳಿಸಿದರು.
ಅವರು ಭಾನುವಾರ ಶಿವಮೊಗ್ಗ ನಗರದ ಬಿ.ಬಿ.ರಸ್ತೆಯಲ್ಲಿರುವ ಸಂಸ್ಕೃತ ಭಾರತಿ ನೀವೇಶನದಲ್ಲಿ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ, ಮತ್ತು ವಾಸವಿ ಅಕಾಡೆಮಿಯವರು ಯೋಜಿಸಿರುವ ಸಂಸ್ಕೃತ, ಪ್ರಕೃತಿ ಅಧ್ಯಯನ ಮತ್ತು ಸಾಹಸ ಚಟುವಟಿಕೆಗಳನ್ನು ನಡೆಸುವ ಕೇಂದ್ರಕ್ಕೆ ಭೂಮಿಪೂಜಾ ಮತ್ತು ಶಿಲಾನ್ಯಾಸವನ್ನು ನೆರವೇರಿಸಿ ಮಾತನಾಡುತ್ತ ಸಂಸ್ಕೃತ ವಿದ್ಯಾರ್ಥಿಗಳು ಕೇವಲ ಜಪ ತಪಕ್ಕಾಗಿ ಇರದೇ ಇಂದು ಕಂಪ್ಯೂಟರ್ ಕ್ಷೇತ್ರದಲ್ಲೂ ಸಾಧನೆ ಮಾಡುತ್ತಿದ್ದಾರೆ. ಸಂಸ್ಕೃತ ಕಲಿಯುವ ಯುವಕ ಯುವತಿಯರು ಹನುಮಂತನ ಆದರ್ಶಗಳನ್ನು ಪಾಲಿಸಬೇಕು. ಹನುಮಂತ ಸಂಸ್ಕೃತ ಮಹಾ ವ್ಯಾಕರಣ ಪಂಡಿತ ಜೊತೆಗೆ ಅತ್ಯಂತ ಸಾಹಸಿ ಚಾರಣಿಗ ಎಂದು ಹನುಮಂತನ ಸಾಹಸ ಮತ್ತು ಸಂಸ್ಕೃತದ ಗುಣಗಳನ್ನು ವಿವರಿಸಿದರು. ಇಂದಿನ ವಿದ್ಯಾರ್ಥಿಗಳಲ್ಲಿ ಸಾಹಸ ಪ್ರವೃತ್ತಿಯ ಗುಣ ಬೆಳೆಸುವಲ್ಲಿ ಶಾಲಾ ಕಾಲೇಜುಗಳು ಮುಂದಾಗಬೇಕು,ಮುಂಬರುವ ದಿನಗಳು ಯುವ ಜನಾಂಗಕ್ಕೆ ಸವಾಲಿನ ದಿನಗಳು ಬರಲಿದೆ ಹಾಗಾಗಿ ಪ್ರತಿಯೊಬ್ಬರೂ ಸಾಹಸ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಯುವಕರಿಗೆ ಕರೆ ನೀಡಿದರು.
ಈ ನಿಟ್ಟಿನಲ್ಲಿ ವಾಸವಿ ಅಕಾಡೆಮಿ, ಸಂಸ್ಕೃತ ಭಾರತಿ, ಮತ್ತು ತರುಣೋದಯ ಸಂಸ್ಥೆಗಳು ಸಂಸ್ಕೃತ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಚಾರಣ, ಬೋಟಿಂಗ್, ವರುಣ ನೃತ್ಯ, ರಾಕ್ ಕ್ಲೈಂಬಿಂಗ್, ಪರ್ವತಾರೋಹಣ, ಮುಂತಾದ ಸಾಹಸ ಚಟುವಟಿಕೆಗಾಗಿ ಕೇಂದ್ರವೊಂದನ್ನು ಆರಂಬಿಸುತ್ತಿರುವುದು ಬಹುಷ ದೇಶದಲ್ಲಿಯೇ ಇದು ಪ್ರಥಮ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಎಷ್ಟು ಮುಖ್ಯವೋ ಅಷ್ಟೇ ದೇಹದ ಆರೋಗ್ಯವೂ ಕೂಡ ಮುಖ್ಯ, ಸಾಹಸ ಚಟುವಟಿಕೆಗಳಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪ್ರಕೃತಿಯೇ ಗುರು ಎಂಬುದನ್ನು ಯಾರೂ ಮರೆಯಬಾರದು, ಇಂದು ಪ್ರಕೃತಿಯನ್ನು ನಾವು ಹಾಳು ಮಾಡುತ್ತಿದ್ದೇವೆ, ಇದರಿಂದ ನಮ್ಮ ಪರಿಸರದ ಮೇಲೆ ದುಷ್ಪರಿಣಾಮ ಬೀಳುತ್ತಿದೆ, ಸಂಸ್ಕೃತ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಚಾರಣಗಳಲ್ಲಿ ಭಾಗವಹಿಸಿ ಪ್ರಕೃತಿಯ ರಕ್ಚಣೆಗೆ ಮುಂದಾಗಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ವಾಸವಿ ಅಕಾಡೆಮಿ ಅದ್ಯಕ್ಷ ಶಾಮಸುಂದರ್, ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆಯ ಅಧ್ಯಕ್ಷ ಟಿ.ವಿ.ನರಸಿಂಹ ಮೂರ್ತಿ, ಸಂಸ್ಕೃತ ಭಾರತಿ ನಗರ ಅಧ್ಯಕ್ಷ ಎನ್.ವಿ.ಶಂಕರನಾರಾಯಣ, ಸಂಸ್ಕೃತ ಭಾರತಿ ಕರ್ನಾಟಕ ಟ್ರಸ್ಟ್ ಕೋಶಾಧಿಕಾರಿ ಮಧುಸೂಧನ ದೇಸಾಯಿ, ಪ್ರಾಂತ ಸಹ ಮಂತ್ರಿ ಭಾಗ್ಯಲಕ್ಷ್ಮೀ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಮೊಗ್ಗ ವಿಭಾಗ ಸಂಯೋಜಕ ಗಿರೀಶ್ ಕಾರಂತ್, ಸಚ್ಚಿದಾನಂದ, ಸ್ವರೂಪ್, ಹರ್ಷ ಕಾಮತ್, ಪಿಚಾಂಡಿ, ಡಾ.ಭರತ್, ವಾಸವಿ ನಾಗರಾಜ್, ಸಚ್ಚಿದಾನಂದ ಮುಂತಾದವರು ಉಪಸ್ಥಿತರಿದ್ದರು.