ಶಿವಮೊಗ್ಗ: ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಕೆಲಸ ಆಗಬೇಕು. ವಿದ್ಯಾರ್ಥಿಗಳಲ್ಲಿ ಸಾಕಷ್ಟು ಪ್ರತಿಭೆ ಇದ್ದು, ಅವಕಾಶಗಳು ಸಿಕ್ಕಲ್ಲಿ ಪ್ರತಿಭೆ ಪ್ರದರ್ಶನಕ್ಕೆ ಸಹಕಾರಿ ಆಗುತ್ತದೆ ಎಂದು ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಅಧ್ಯಕ್ಷ ಸತೀಶ್ ಚಂದ್ರ ಹೇಳಿದರು.
ಜೆಸಿಐ ಸಪ್ತಾಹದ ಪ್ರಯುಕ್ತ ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಪರಿಸರ ಜಾಗೃತಿ, ಚಿತ್ರಕಲೆ ಸ್ಪರ್ಧೆ ಹಾಗೂ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಭವಿಷ್ಯಕ್ಕಾಗಿ ತರಬೇತಿ, ಆರೋಗ್ಯವೇ ಭಾಗ್ಯ, ಆತ್ಮತೃಪ್ತಿಗಾಗಿ ದಾನ, ಪ್ರಕೃತಿ ಆರಾಧನೆ, ಕ್ವಿಜ್ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ರೋಟರಿ ವಲಯ ೧೧ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಜೆಸಿಐ ಸಂಸ್ಥೆ ಸಮಾಜಮುಖಿ ಕಾರ್ಯಗಳ ಜತೆಯಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಉತ್ತಮ ತರಬೇತಿಗಳನ್ನು ನಡೆಸುತ್ತಿದೆ. ಜೆಸಿಐ ಸೇವಾ ಕಾರ್ಯಗಳಿಗೆ ಕಳೆದ ಸಾಲಿನಲ್ಲಿ ಕಮಲಪತ್ರ ಪುರಸ್ಕಾರ ದೊರೆತಿರುವುದು ಶ್ಲಾಘನೀಯ ಎಂದು ಹೇಳಿದರು.
ಜೆಸಿಐ ಸಪ್ತಾಹದ ಪ್ರಯುಕ್ತ ಶಿವಮೊಗ್ಗ ನಗರದ ವಿವಿಧ ಶಾಲೆಗಳು ಹಾಗೂ ಬಡಾವಣೆಗಳಲ್ಲಿ ಪರಿಸರ ಜಾಗೃತಿ, ಚಿತ್ರಕಲೆ ಸ್ಪರ್ಧೆ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿ ನಡೆಸುತ್ತಿರುವುದು ಉತ್ತಮ ಕಾರ್ಯ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದರು.

ಪರಿಸರ ಜಾಗೃತಿ ಚಿತ್ರಕಲೆ ಸ್ಪರ್ಧೆಯಲ್ಲಿ ಉತ್ತಮವಾಗಿ ಚಿತ್ರ ಬಿಡಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಪಾರಿತೋಷಕ ನೀಡಲಾಯಿತು. ಸ್ಪರ್ಧೆಯಲ್ಲಿ ನವ್ಯಶ್ರೀ, ಅಕ್ಷಿತ್, ಅದ್ವಿಕ್, ಖುಷಿ, ನಮಾ ಕಾಮತ್, ಚಂದ್ರ ಕೆ.ನಾಯಕ್, ಮಂದಾರ, ಜೂಲಿನ್, ಪ್ರತೀಕ್ಷಾ ಅವರಿಗೆ ಬಹುಮಾನ ನೀಡಲಾಯಿತು.
ಜೆಸಿಐ ಸಹ್ಯಾದ್ರಿ ಶಿವಮೊಗ್ಗ ಸಂಸ್ಥೆಯ ಸ್ವಪ್ನಾ ಬದರಿನಾಥ್, ಕಿಶೋರ್, ಮುಖ್ಯಶಿಕ್ಷಕ ವಸುಮತಿ ಕಾಮತ್, ರಾಣಿ, ನಾಗರತ್ನ, ವಸುಂಧರಾ, ಶುಭ, ಸ್ಫೂರ್ತಿ, ಪ್ರಭಾ, ರೇಣುಕಾ, ಉಷಾ, ಸುಜಾತ, ಅಮೃತಾ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…