ಶಿವಮೊಗ್ಗ: ಅಜ್ಞಾನದಿಂದ ಜ್ಞಾನದೆಡೆಗೆ ಕರೆದೊಯ್ಯುವ ಗುರುವಿನ ಅಗತ್ಯತೆ ಸಮಾಜಕ್ಕೆ ಇದ್ದು, ಒಳ್ಳೆಯ ಗುರಿ ಮತ್ತು ಉತ್ತಮ ಗುರುವಿನ ಮಾರ್ಗದರ್ಶನ ಹಾಗೂ ಮೌಲ್ಯಯುತ ಸಂಸ್ಕಾರ ಅವಶ್ಯ ಎಂದು ಬೆಕ್ಕಿನ ಕಲ್ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ಶಿವಮೊಗ್ಗ ನಗರದ ಬೆಕ್ಕಿನ ಕಲ್ಮಠದಲ್ಲಿ ಬಸವೇಶ್ವರ ವೀರಶೈವ ಸಮಾಜ, ಜಂಗಮ ಸಮಾಜ ಮೊದಲಾದ ಸಂಘಟನೆಗಳಿಂದ ಆಯೋಜಿಸಿದ್ದ ಗುರುಪೂರ್ಣಿಮಾ-ವ್ಯಾಸಪೂರ್ಣಿಮಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.ಪ್ರತಿಯೊಬ್ಬರ ಜೀವನದಲ್ಲಿ ಒಳ್ಳೆಯ ಆಲೋಚನೆ ಮತ್ತು ಸಂಸ್ಕಾರದ ತಿಳವಳಿಕೆಯ ಬುದ್ದಿಯನ್ನು ಮತ್ತು ಒಳ್ಳೆಯ ಮಾರ್ಗವನ್ನು ತಿಳಿಸಿಕೊಡುವವನು ಗುರು ಆಗಿರುತ್ತಾನೆ. ಗುರುವಿನ ಸ್ಥಾನ ತುಂಬಾ ದೊಡ್ಡದು. ಗುರುವಿನ ಸ್ಥಾನಕ್ಕೆ ವಿಶೇಷ ಗೌರವ ಘನತೆ ಇದ್ದು, ತ್ಯಾಗ ಹಾಗೂ ನಿಸ್ವಾರ್ಥದಿಂದ ಸೇವೆ ಮಾಡುವ ಮನೋಭಾವ ಗುರುವಿನಲ್ಲಿ ಇರುತ್ತದೆ ಎಂದು ತಿಳಿಸಿದರು.ಹಿಂದಿನ ಕಾಲದಲ್ಲಿ ಇರುತ್ತಿದ್ದ ಗುರುಭಕ್ತಿಗೂ ಈಗಿನ ಗುರುಭಕ್ತಿಗೂ ತುಂಬಾ ವ್ಯತ್ಯಾಸವಿದೆ. ಮಠದ ಪರಂಪರೆ ಬಗ್ಗೆ ಮಾಹಿತಿ ಕೊರತೆ ಇಂದಿನ ಮಕ್ಕಳಿಗಿದೆ. ಗುರುಭಕ್ತಿ ಹಾಗೂ ಮಠದ ಪರಂಪರೆ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಬಸವೇಶ್ವರ ವೀರಶೈವ ಸಮಾಜ, ಜಂಗಮ ಸಮಾಜ, ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಬೆಕ್ಕಿನ ಕಲ್ಮಠ ಭಕ್ತವೃಂದದಿಂದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಿಸಲಾಯಿತು.ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎನ್.ಜೆ. ರಾಜಶೇಖರ್, ಸಾಹಿತಿಗಳಾದ ಕತ್ತಿಗೆ ಚನ್ನಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಜಿ.ವಿಜಯ್‌ಕುಮಾರ್, ಜಂಗಮ ಸಮಾಜದ ಮಹಾಲಿಂಗಶಾಸ್ತಿç, ಕೆ.ಆರ್. ಸೋಮನಾಥ್, ರುದ್ರಯ್ಯ, ವೀರಭದ್ರಯ್ಯ, ಡಾ. ಮಹಾದೇವಯ್ಯ, ರೇಣುಕಾರಾಧ್ಯ, ಸೋಮಶೇಖರಯ್ಯ ಮೊದಲಾದವರಿದ್ದರು.