ಶಿವಮೊಗ್ಗ: ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ಬದಲಾಯಿಸಿರುವುದನ್ನು ವಿರೋಧಿಸಿ ಮತ್ತು ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯಿಸಿ ಇಂದು ಶ್ರೀ ನಾರಾಯಣಗುರು ವಿಚಾರ ವೇದಿಕೆ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ರಾಜ್ಯ ಸರ್ಕಾರ ಬ್ರಹ್ಮಶ್ರೀ ನಾರಾಯಣಗುರು ಜೀವನ ಚರಿತ್ರೆಯನ್ನು 10 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ತೆಗೆದು 7 ನೇ ತರಗತಿಯ ಕನ್ನಡ ಐಚ್ಛಿಕ ವಿಷಯಕ್ಕೆ ಬದಲಾಯಿಸಿದೆ. ಇದನ್ನು ಓದಲು ಎಲ್ಲರಿಂದಲೂ ಸಾಧ್ಯವಿಲ್ಲ. ಹಾಗಾಗಿ ಈಗ ಇರುವಂತೆಯೇ 10  ನೇ ತರಗತಿಯ ಸಮಾಜವಿಜ್ಞಾನ ಪಠ್ಯದಲ್ಲಿ ನಾರಾಯಣ ಗುರುಗಳ ಜೀವನ ಚರಿತ್ರೆ ಸೇರಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ರೋಹಿತ್ ಚಕ್ರತೀರ್ಥ ಸಮಿತಿ ಭಗತ್ ಸಿಂಗ್, ಬಸವಣ್ಣ, ಕುವೆಂಪು, ಅಂಬೇಡ್ಕರ್ ಅವರ ಚರಿತ್ರೆಯ ಪಾಠಗಳಲ್ಲಿ ಆಗಿರುವ ಲೋಪ ದೋಷಗಳನ್ನು ಆಯಾ ಮೇಲ್ವರ್ಗದ ಸ್ವಾಮೀಜಿಗಳ ಹೋರಾಟದ ಎಚ್ಚರಿಕೆ ಬಂದಾಗ ತಿದ್ದಿಕೊಳ್ಳಲಾಗಿದೆ. ಆದರೆ, ಮಹಾನ್ ಸಂತ ಶೈಕ್ಷಣಿಕ ಕ್ರಾಂತಿಯನ್ನೇ ಉಂಟು ಮಾಡಿದ ಬ್ರಹ್ಮಶ್ರೀ ನಾರಾಯಣಗುರುಗಳ ಜೀವನ ಚರಿತ್ರೆಯನ್ನು ಮಾತ್ರ ತೆಗೆದು ಹಾಕಲಾಗಿದೆ. ಇದನ್ನು ನಮ್ಮ ಸಮಾಜ ಒಪ್ಪುವುದಿಲ್ಲ.

ಈ ಹಿಂದೆಯೂ ಕೂಡ ಜನವರಿ 26 ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಮೂರ್ತಿ ಇರುವ ಸ್ತಬ್ಧ ಚಿತ್ರದ ಟ್ಯಾಬ್ಲೋಗೆ ನಿರಾಕರಿಸಲಾಗಿತ್ತು ಎಂದು ದೂರಿದರು.ಇದರ ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಲ್ಲಿ ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಇದಕ್ಕಾಗಿ 500 ಕೋಟಿ ರೂ. ಮೀಸಲಾಗಿಡಬೇಕು. ನಿಗಮ, ಮಂಡಳಿಗಳ ನೇಮಕಾತಿಯಲ್ಲಿ  ಈಡಿಗ ಸಮಾಜಕ್ಕೆ ಆದ್ಯತೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಈ ಸಂದರ್ಭದಲ್ಲಿ ವಿಚಾರ ವೇದಿಕೆಯ ಪದಾಧಿಕಾರಿಗಳಾದ ಪ್ರವೀಣ್ ಹಿರೇಇಡಗೋಡು, ಮುಡುಬ ರಾಘವೇಂದ್ರ, ಕೆ.ಎಲ್. ಉಮೇಶ್, ಟೆಂಕಬೈಲ್ ಲೋಕೇಶ್, ಕೆ.ಪಿ. ಲಿಂಗೇಶ್, ವಿ.ಹೆಚ್. ಶಿವಮೂರ್ತಿ, ಮೋಹನ್, ಯೋಗೀಶ್, ಹೂವಪ್ಪ, ವೀರಭದ್ರಪ್ಪ, ಮರಿಯಪ್ಪ ನಾಯಕ, ರಾಜೇಶ್, ಪುನಿತ್ ಬೆಳ್ಳೂರು ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…