ಶಿವಮೊಗ್ಗ: ಕೆ.ಆರ್.ಎಸ್. ಪಕ್ಷದ (ಕರ್ನಾಟಕ ರಾಷ್ಟ್ರ ಸಮಿತಿ) ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿರುವ ವಸತಿ ಸಚಿವ ವಿ. ಸೋಮಣ್ಣ ಅವರ ಬೆಂಬಲಿಗರನ್ನು ಬಂಧಿಸುವಂತೆ ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಕರ್ನಾಟಕ ರಾಷ್ಟ್ರ ಸಮಿತಿ ಜಿಲ್ಲಾ ಯುವ ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಜುಲೈ 13 ರಂದು ಕೆ.ಆರ್.ಎಸ್. ಪಕ್ಷದ ಬೆಂಗಳೂರು ನಗರ ಕಾರ್ಯದರ್ಶಿಯಾದ ಎಲ್. ಜೀವನ್, ರಾಜ್ಯ ಉಪಾಧ್ಯಕ್ಷ ಎಸ್.ಹೆಚ್. ಲಿಂಗೇಗೌಡರ ಮೇಲೆ ವಸತಿ ಸಚಿವ ವಿ. ಸೋಮಣ್ಣ ಅವರ ಬೆಂಬಲಿಗರು ಫ್ಲೆಕ್ಸ್ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿದ್ದಾರೆ. ಇದನ್ನು ಕೆ.ಆರ್.ಎಸ್. ತೀವ್ರವಾಗಿ ಖಂಡಿಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.ಮುಖ್ಯಮಂತ್ರಿಯವರು ಸೋಮಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು. ಗೂಂಡಾ ಪಡೆಗೆ ಕುಮ್ಮಕ್ಕು ನೀಡಿ ಹಲ್ಲೆ ಮಾಡಿದವರನ್ನು ಬೆಂಬಲಿಸಿದ ಸೋಮಣ್ಣ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಕೆ.ಆರ್.ಎಸ್. ಯುವ ಘಟಕದ ಜಿಲ್ಲಾಧ್ಯಕ್ಷ ಬಿ.ಆರ್. ಮಧು, ರೈತ ಘಟಕದ ಅಧ್ಯಕ್ಷ ಶರತ್, ಜಿಲ್ಲಾ ಸಂಚಾಲಕ ಮೊಹಮ್ಮದ್ ಅಯಾಜ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…