ಶಿವಮೊಗ್ಗ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆ ಅಡಿಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡುವ ಮೂಲಕ ಫಲಾನುಭವಿಗಳಿಗೆ ಅನುಕೂಲ ಮಾಡಿಕೊಡುವ ಬಗ್ಗೆ ವಿಧಾನ ಪರಿಷತ್ ಸದಸ್ಯರೊಂದಿಗೆ ಸೇರಿ ಸರ್ಕಾರದ ಗಮನಸೆಳೆದಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜೀವ್ ಗಾಂಧಿ ವಸತಿ ಯೋಜನೆ, ಇಂದಿರಾ ಆವಾಸ್ ವಸತಿ ಯೋಜನೆ ಸೇರಿದಂತೆ ಹಲವು ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಈಗಿರುವ ನಿಯಮಗಳು ಬಿಗಿಯಾಗಿದ್ದು, ಹಲವು ತಾಂತ್ರಿಕ ಕಾರಣಗಳಿಂದ ಪರಿಹಾರಧನ ಸರಿಯಾಗಿ ಸಿಗುತ್ತಿಲ್ಲ. ಈ ಬಗ್ಗೆ ಸಹಾಯಧನ ಹೆಚ್ಚಿಸುವುದರ ಜೊತೆಗೆ ಸರಿಯಾದ ಸಮಯಕ್ಕೆ ತಲುಪುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಅವರು ಒಪ್ಪಿದ್ದಾರೆ. ವಿಧಾನ ಪರಿಷತ್ ನ ಸದಸ್ಯರೆಲ್ಲರೂ ಪಕ್ಷಾತೀತವಾಗಿ ಈ ಮನವಿ ಮಾಡಿದ್ದೇವೆ ಎಂದರು.
ಫಲಾನುಭವಿಗಳಲ್ಲಿ ಅನೇಕರಿಗೆ ಮೊದಲ ಕಂತು ಬಿಡುಗಡೆಯಾಗಿದೆ. ಎರಡನೇ ಕಂತು ಬಿಡುಗಡೆಯಾಗಿಲ್ಲ. ಇದಕ್ಕೆ ಹಲವು ತಾಂತ್ರಿಕ ಕಾರಣಗಳಿವೆ. ದಾಖಲೆಗಳನ್ನು ಅಪ್ ಲೋಡ್ ಮಾಡಲು ಸಮಸ್ಯೆಯಾಗುತ್ತಿದೆ. ಪಿಡಿಒ ಜವಾಬ್ದಾರಿ ಹೆಚ್ಚಿರುತ್ತದೆ. ಈ ಪಿಡಿಒಗಳು ಫಲಾನುಭವಿಗಳಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ. ಅಲೆದಾಡಿಸುತ್ತಾರೆ. ಈ ಬಗ್ಗೆಯೂ ಸರ್ಕಾರದ ಗಮನಸೆಳೆದಿದ್ದೇವೆ ಎಂದರು.3 ವರ್ಷಕ್ಕೂ ಹೆಚ್ಚು ಕಾಲ ಒಂದೇ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡುವ ಪಿಡಿಒಗಳನ್ನು ವರ್ಗಾವಣೆ ಮಾಡಲು ಕೋರಿದ್ದೇವೆ. ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 647 ಮನೆಗಳಿಗೆ ಸಹಾಯಧನ ಬಂದಿರಲಿಲ್ಲ. ಇದರ ವಿವರ ತರಿಸಿಕೊಂಡು ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳನ್ನು ಬಗೆಹರಿಸಿ 400 ಮನೆಗಳಿಗೆ ಸಹಾಯಧನ ನೀಡಲಾಗಿದೆ. ಇನ್ನೂ 247 ಮನೆಗಳಿಗೆ ಪರಿಹಾರ ಬಾಕಿ ಇದ್ದು, ಅದನ್ನು ಕೂಡ ಶೀಘ್ರದಲ್ಲಿಯೇ ನೀಡುತ್ತೇವೆ ಎಂದ ಅವರು, ಈಗಿರುವ ಪರಿಹಾರಧನ ಫಲಾನುಭವಿಗಳಿಗೆ ಸಾಕಾಗುವುದಿಲ್ಲ. ಇದನ್ನು ಕೂಡ ಹೆಚ್ಚಿಸಲು ಸರ್ಕಾರಕ್ಕೆ ಒತ್ತಾಯ ಮಾಡಲಾಗಿದೆ ಎಂದರು.
ಪಂಚಾಯತ್ ರಾಜ್ ಬಲಿಷ್ಠಗೊಳಿಸುವ ಉದ್ದೇಶ ನಮಗಿದೆ. ಹಾಗಾಗಿಯೇ ಎಲ್ಲಾ ವಿಧಾನ ಪರಿಷತ್ ಸದಸ್ಯರೊಂದಿಗೆ ಮಾತನಾಡಿದ್ದೇನೆ. ಪಂಚಾಯಿತಿ ಸದಸ್ಯರಿಗೆ ಗೌರವಧನ ಹೆಚ್ಚಿಸುವ ಬಗ್ಗೆ ನನ್ನ ಮೊದಲ ಆದ್ಯತೆ ಇತ್ತು. ಈಗಾಗಲೇ ಈ ಬಗ್ಗೆ ಮಾತನಾಡಿದ್ದೇವೆ. ಸುಮಾರು 6 ಗಂಟೆಗಳ ಕಾಲ ವಿಧಾನ ಪರಿಷತ್ ನಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದಿದ್ದು ಸ್ವಾಗತದ ವಿಷಯವಾಗಿದೆ. ಇದರ ಜೊತೆಗೆ ಗ್ರಾಮಪಂಚಾಯಿತಿ ಸಿಬ್ಬಂದಿಗಳಿಗೆ ಬರಬೇಕಾದ ಹಣ ಕೂಡ ಶೀಘ್ರವೇ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದೇನೆ ಎಂದರು.ಟ್ರೇಡ್ ಲೈಸೆನ್ಸ್ ವಿಧಾನ ಪರಿಷತ್ ನಲ್ಲಿ ಚರ್ಚಿಸುತ್ತೇನೆ. ರಾಗಿ ಖರೀದಿ ಕೇಂದ್ರ ಸ್ಥಾಪನೆಗೆ ಒತ್ತಾಯಿಸುತ್ತೇನೆ. ದೊಡ್ಡ ನಗರಗಳಲ್ಲಿ ಯೆಲ್ಲೋ ಬೋರ್ಡ್ ಇರುವ ವಾಹನಗಳಿಗೆ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದು, ಇದಕ್ಕೆ ತಿದ್ದುಪಡಿ ತರಲು ಯೋಚಿಸಲಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಮತ್ತು ಇತರೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಬಿಡುಗಡೆಯಾಗಿಲ್ಲ. ಅದನ್ನು ಕೂಡ ತಕ್ಷಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು.
ಅಕ್ಕಿ ಸೇರಿದಂತೆ ಆಹಾರಧಾನ್ಯಗಳ ಮೇಲೆ ಜಿ.ಎಸ್.ಟಿ. ವಿಧಿಸಿರುವ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಅನಿವಾರ್ಯ ಕಾರಣಗಳಿಂದ ಜಿ.ಎಸ್.ಟಿ. ವಿಧಿಸಬೇಕಾಗುತ್ತದೆ. ಈ ಹಣ ಕೂಡ ದೇಶದ ಅಭಿವೃದ್ಧಿಗೆ ಖರ್ಚಾಗುತ್ತದೆ. ಇನ್ನು ಆರು ತಿಂಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾ ಎನ್.ಕೆ. ಜಗದೀಶ್, ಬಿ.ಆರ್. ಮಧುಸೂದನ್, ಹೃಷಿಕೇಶ್ ಪೈ, ಗಂಗಾಧರ್, ಸತೀಶ್, ದಿನೇಶ್ ಇದ್ದರು.ಬಾಕ್ಸ್:ನಾನು ಈಗ ಆರ್ಯವೈಶ್ಯ ಸಮುದಾಯದ ನಿಗಮ ಮಂಡಳಿ ಅಧ್ಯಕ್ಷನಾಗಿಲ್ಲ ಎಂದು ಡಿ.ಎಸ್. ಅರುಣ್ ಸ್ಪಷ್ಟಪಡಿಸಿದರು. ಸಮುದಾಯದ ಜನರೂ ಸೇರಿದಂತೆ ಹಲವರು ನಾನು ಈಗಲೂ ನಿಗಮದ ಅಧ್ಯಕ್ಷನಾಗಿದ್ದೇನೆ ಎಂದು ತಿಳಿದುಕೊಂಡಿದ್ದಾರೆ. ಈ ಬಗ್ಗೆ ದೂರವಾಣಿ ಮೂಲಕ ಕೇಳುತ್ತಿದ್ದಾರೆ. ಆದರೆ, ಈಗ ಮುಂದುವರೆದಿಲ್ಲ. ನವೆಂಬರ್ 17 ರಂದೇ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ನೀಡಿಯೇ ವಿಧಾನ ಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದೆ ಎಂದರು.