ಶಿವಮೊಗ್ಗ: ಕೇಂದ್ರ ಸರ್ಕಾರ ಅಗತ್ಯ ಆಹಾರ ವಸ್ತುಗಳ ಮೇಲೆ ಜಿ.ಎಸ್.ಟಿ. ವಿಧಿಸಿರುವುದನ್ನು ವಿರೋಧಿಸಿ, ವಿಧಿಸಿರುವ ಜಿ.ಎಸ್.ಟಿ. ರದ್ದು ಮಾಡಲು ಆಗ್ರಹಿಸಿ ಇಂದು ಬೆಳಿಗ್ಗೆ ಜಯಕರ್ನಾಟಕ ಸಂಘಟನೆ ಜಿಲ್ಲಾ ಘಟಕ ಹಾಗೂ ಮಹಿಳಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕೇಂದ್ರ ಸರ್ಕಾರ ಅಸ್ವಾಭಾವಿಕ ಜಿ.ಎಸ್.ಟಿ. ದರವನ್ನು ಜಾರಿಗೆ ತರಲು ಹೊರಟಿದೆ. ಆಹಾರ ಪದಾರ್ಥಗಳ ಮೇಲೂ ತೆರಿಗೆ ವಿಧಿಸಿದೆ. ಬಡವರು ಉಪಯೋಗಿಸುವ ಹಾಲು ಮೊಸರು, ಮಜ್ಜಿಗೆ, ಹಪ್ಪಳ, ಉಪ್ಪಿನಕಾಯಿ, ಒಣಕಾಳು, ತರಕಾರಿ, ಮಾಂಸ, ಮೀನುಗಳ ಪ್ಯಾಕ್, ಮುಂತಾದ ವಸ್ತುಗಳ ಮೇಲೆ ಅಸಂಬದ್ಧವಾಗಿ ತೆರಿಗೆ ವಿಧಿಸಿರುವುದು ಖಂಡನೀಯವಾಗಿದೆ. ಅದರಲ್ಲೂ ಅಕ್ಕಿ ಮೇಲೆ ಜಿ.ಎಸ್.ಟಿ. ಹೇರಿರುವುದು ಬಡವರ ಅನ್ನವನ್ನು ಕಸಿದುಕೊಂಡಂತಾಗಿದೆ. ಇದರಿಂದ ರೈತರಿಗೂ ಲಾಭವಿಲ್ಲ. ವರ್ತಕರಿಗೂ ಲಾಭವಿಲ್ಲ ಎಂದು ದೂರಿದರು.ಬಡ ಹಾಗೂ ಮಧ್ಯಮ ವರ್ಗದ ನಾಗರೀಕರು ಹೆಚ್ಚಾಗಿ ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳನ್ನು ಉಪಯೋಗಿಸುತ್ತಾರೆ. ಈಗಾಗಲೇ ಕೊರೋನಾದ ಸಂದರ್ಭದಿಂದ ಮತ್ತು ಅತಿವೃಷ್ಟಿ, ಅನಾವೃಷ್ಟಿಗಳಿಂದ ಜನಸಾಮಾನ್ಯರು ತೊಂದರೆಗೆ ಈಡಾಗಿದ್ದಾರೆ.

ಈಗ ಜನತೆಯ ಮೇಲೆ ಗಾಯದ ಮೇಲೆ ಬರೆ ಹಾಕಿದಂತೆ ತೆರಿಗೆಯನ್ನ ವಿಧಿಸಿದ್ದಾರೆ. ಈ ರೀತಿ ಏಕಾಏಕಿ ಜಿಎಸ್ಟಿಿ ದರವನ್ನು ಏರಿಸಿರುವುದು ಅತ್ಯಂತ ಖಂಡನೀಯ. ಮನುಷ್ಯವಿರೋಧಿ ನೀತಿಗಳನ್ನು ಅನುಸರಿಸುವುದರಿಂದ ಯಾವುದೇ ರಾಷ್ಟ್ರ ಕಲ್ಯಾಣದತ್ತ ಸಾಗಲು ಸಾಧ್ಯವಿಲ್ಲ. ಅದ್ದರಿಂದ ಕೂಡಲೇ ಏರಿಕೆ ಮಾಡಲು ಉದ್ದೇಶಿಸಿರುವ ಜಿಎಸ್ಟಿಗ ದರವನ್ನು ವಾಪಾಸ್ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಗೌರವಾಧ್ಯಕ್ಷ ಸುರೇಶ್ ಶೆಟ್ಟಿ, ಮಹಿಳಾ ಘಟಕದ ಅಧ್ಯಕ್ಷೆ ನಾಜೀಮಾ, ಕಾರ್ಯದರ್ಶಿ ಪ್ರೇಮ ಶೆಟ್ಟಿ, ಪ್ರಮುಖರಾದ ಮೋಹನ್ ದೇವರಾಜ್, ತ್ಯಾಗರಾಜ್, ಜಯಂತಿ, ಶಶಿಕುಮಾರ್, ಅನಿಲ್, ಮುಕುಂದ್ ಮುಂತಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…