ಶಿವಮೊಗ್ಗ: ವಿನೋಬನಗರದ ಶಿವಾಲಯದ ಪಕ್ಕದಲ್ಲಿ ನಗರದ ಬೀದಿ ಬದಿ ವ್ಯಾಪಾರಿಗಳಿಗೆ ಪುನರ್ವಸತಿ ಕಲ್ಪಿಸುವ ಮಾರಾಟ ಮಳಿಗೆಗಳನ್ನು ನೀಡುವ ಕಾರ್ಯಕ್ರಮವನ್ನು ಶಾಸಕ ಕೆ.ಎಸ್. ಈಶ್ವರಪ್ಪ ಇಂದು ಉದ್ಘಾಟಿಸಿದರು.

ಕಾಮಗಾರಿ ಮುಗಿದು ಹತ್ತಾರು ವರ್ಷಗಳಾದರೂ ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯ ಇದ್ದುದರಿಂದ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಮಳಿಗೆ ಹಂಚಿಕೆ ತಡವಾಗಿತ್ತು. ಸರ್ಕಾರದ ಮಟ್ಟದಲ್ಲಿ ಯಾವುದೇ ಕ್ರಮಕೈಗೊಳ್ಳದೇ ನನೆಗುದಿಗೆ ಬಿದ್ದಿದ್ದು, ಇದನ್ನು ಪರಿಹರಿಸಿ ಅರ್ಹ ಫಲಾನುಭವಿಗಳಿಗೆ ಮೇಯರ್ ಸುನಿತಾ ಅಣ್ಣಪ್ಪನವರ ಅವಿರತ ಶ್ರಮದಿಂದ ಲಾಟರಿ ಮೂಲಕ ಇಂದು ಮಳಿಗೆಗಳನ್ನು ಹಂಚಲಾಗಿದೆ.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್. ಈಶ್ವರಪ್ಪ, ಸ್ಮಾರ್ಟ್ ಸಿಟಿ ಯೋಜನೆಯಡಿ ನಗರ ಅಭಿವೃದ್ಧಿ ಮಾಡುತ್ತಿರುವ ಸಂದರ್ಭದಲ್ಲಿ ವಿನೋಬನಗರ ಭಾಗದಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿರುವವರಿಗೆ ಅನುಕೂಲವಾಗಲು ತೆರವುಗೊಳಿಸುವ ಮುನ್ನ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು.

ಇಂದಿನಿಂದ ಯಾರೂ ಮತ್ತೆ ಬೀದಿ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುವ ಹಾಗಿಲ್ಲ. ದುರುಪಯೋಗಪಡಿಸಿಕೊಳ್ಳುವಂತಿಲ್ಲ ಎಂದು ತಿಳಿಸಿದರು.ಮಳಿಗೆ ಪಡೆದುಕೊಂಡವರು ಮತ್ತೆ ತಮ್ಮ ಕುಟುಂಬದವರನ್ನು ಬೀದಿ ಬದಿಯಲ್ಲಿ ವ್ಯಾಪಾರಕ್ಕೆ ಬಿಡುವಂತಿಲ್ಲ. ಗ್ರಾಹಕರನ್ನು ಸೆಳೆದು ಉತ್ತಮ ಗುಣಮಟ್ಟದ ತರಕಾರಿ, ಸೊಪ್ಪು, ಆಹಾರ ಪದಾರ್ಥಗಳನ್ನು ಸ್ಪರ್ಧಾತ್ಮಕ ದರದಲ್ಲಿ ನೀಡಿ ಜನಮನ್ನಣೆ ಗಳಿಸಬೇಕೆಂದು ಅವರು ತಿಳಿಸಿದರು.ಈ ಮಾರುಕಟ್ಟೆಯಲ್ಲಿ 70 ಮಳಿಗೆಗಳಿದ್ದು, ಪ್ಲಾಸ್ಟಿಕ್ ಮುಕ್ತ ಮಳಿಗೆಗಳನ್ನಾಗಿ ಮಾಡಲಾಗಿದೆ. ಇದಕ್ಕೆ ವ್ಯಾಪಾರಸ್ಥರು ಕೂಡ ಸಹಕಾರ ನೀಡುವ ಭರವಸೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಶಾಸಕ ಆಯನೂರು ಮಂಜುನಾಥ್, ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಚನ್ನಬಸಪ್ಪ, ಜ್ಞಾನೇಶ್ವರ್, ಸುರೇಖಾ ಮುರಳೀಧರ್, ಅನಿತಾ ರವಿಶಂಕರ್, ಯಮುನಾ ರಂಗೇಗೌಡ, ರೇಖಾ ರಂಗನಾಥ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…