ಶಿವಮೊಗ್ಗ: ನಾವು ಮಾತಾಡುವುದಕ್ಕಿಂತ ನಾವು ಮಾಡಿದ ಕೆಲಸಗಳೇ ಮಾತನಾಡಬೇಕು ಎಂಬುದನ್ನು ದೇಶೀಯ ವಿದ್ಯಾಶಾಲಾ ಸಮಿತಿ ತೋರಿಸಿಕೊಟ್ಟಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್. ವೈಶಾಲಿ ಹೇಳಿದ್ದಾರೆ.

ಅವರು ಇಂದು ನಗರದ ದುರ್ಗಿಗುಡಿಯ ಆಂಗ್ಲಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಗೆ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜ್ ವತಿಯಿಂದ ದುರ್ಗಿಗುಡಿ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯ ಹಿತದೃಷ್ಠಿಯಿಂದ ಮಾಡಿಕೊಂಡಿರುವ ಒಡಂಬಡಿಕೆಯನ್ವಯ ಇಂದು ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 15 ಬೆಂಚ್, 15 ಡೆಸ್ಕ್ ಹಾಗೂ ಅವಶ್ಯಕ ಕ್ರೀಡಾ ಸಾಮಗ್ರಿಗಳನ್ನು ಶಾಲೆಗೆ ಕೊಡುಗೆ ರೂಪದಲ್ಲಿ ವಿತರಣೆ ಮಾಡಿ ಮಾತನಾಡಿದರು.  ಡಿವಿಎಸ್ ಸಂಸ್ಥೆ ಉತ್ತಮ ಗುಣಮಟ್ಟದ ಸಾಮಗ್ರಿಗಳನ್ನು ನೀಡಿದೆ. ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿರುವ 353 ಶಾಲೆಗಳಲ್ಲಿ ಸುಣ್ಣ ಬಣ್ಣ ಅಭಿಯಾನ ಮಾಡಿದಾಗ ಸ್ಥಳೀಯ ನಾಗರಿಕರು ಮತ್ತು ಗ್ರಾಮ ಪಂಚಾಯಿತಿ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪ್ರಯತ್ನದಿಂದ ಶಾಲೆಗಳಿಗೆ ಬಣ್ಣ ಹಚ್ಚುವ ಮತ್ತು ಸಣ್ಣ ಪುಟ್ಟ ಅಭಿವೃದ್ಧಿ ಮಾಡುವ ಕೆಲಸವಾಗಿತ್ತು ಎಂದರು.

ಈಗ ಡಿವಿಎಸ್ ಸಂಸ್ಥೆ ದುರ್ಗಿಗುಡಿ ಶಾಲೆಗೆ ಸಹಕಾರ ನೀಡಿದೆ. ಅನೇಕ ಸರ್ಕಾರಿ ಶಾಲೆಗಳಲ್ಲಿ ಶಾಲಾ ಕೊಠಡಿಗಳು ಮತ್ತು ಶೌಚಾಲಯ ಹಾಗೂ ಮೂಲ ಸೌಲಭ್ಯದ ಕೊರತೆಗಳಿವೆ. ಸರ್ಕಾರಿ ಶಾಲೆಗಳ ಸುಧಾರಣೆಗೆ ದಾನಿಗಳು ಮುಂದೆ ಬರಬೇಕಾಗಿದೆ. ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ಹಾಗೆ ಸರ್ಕಾರಿ ಶಾಲೆಗಳು ಕೂಡ ಅಭಿವೃದ್ಧಿ ಹೊಂದುತ್ತಿವೆ. ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಈ ರೀತಿಯ ಕಾರ್ಯಗಳಿಗೆ ಮುಂದಾಗಬೇಕು ಎಂದರು.ಡಿವಿಎಸ್ ಸಂಸ್ಥೆಯ ಉಪಾಧ್ಯಕ್ಷ ಎಸ್.ಪಿ. ದಿನೇಶ್ ಮಾತನಾಡಿ, ಸಂಸ್ಥೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅನೇಕ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ಪದವೀಧರರ ಸಹಕಾರ ಸಂಘದ ಮೂಲಕವೂ ಶಾಲಾ ಆಡಳಿತ ಮನವಿ ಸಲ್ಲಿಸಿದರೆ ಸುಮಾರು 60 ಸಾವಿರ ರೂ. ವೆಚ್ಚದ ವಾಟರ್ ಫಿಲ್ಟರ್ ಕೊಡುವುದಾಗಿ ಅವರು ಭರವಸೆ ನೀಡಿದರು.ದೇಶೀಯ ವಿದ್ಯಾಸಂಸ್ಥೆ ಇಂತಹ ಅನೇಕ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೊಡುಗೆಗಳನ್ನು ನೀಡಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಡಿವಿಎಸ್ ಅಧ್ಯಕ್ಷ ಕೊಳಲೆ ರುದ್ರೇಗೌಡ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪಾಲಾಕ್ಷಪ್ಪ, ಡಿಡಿಪಿಐ ಪರಮೇಶ್ವರಪ್ಪ, ಬಿಇಒ ನಾಗರಾಜ್, ಡಿವಿಎಸ್ ಪದಾಧಿಕಾರಿಗಳಾದ ಎಸ್. ರಾಜಶೇಖರ್, ಗೋಪಿನಾಥ್, ಬಸಪ್ಪಗೌಡ, ಸಹ ಕಾರ್ಯದರ್ಶಿಗಳಾದ ಡಾ.ಸತೀಶ್ ಕುಮಾರ್ ಶೆಟ್ಟಿ ,ಪ್ರಾಂಶುಪಾಲ ವೆಂಕಟೇಶ್, ಟಿ.ಕೆ. ಶ್ರೀಧರ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…