ಮಕ್ಕಳಲ್ಲಿರುವ ಕ್ರಿಯಾಶೀಲತೆಗೆ ಉತ್ತೇಜನ ನೀಡುವ ಮೂಲಕ ಡೆಂಗ್ಯೂ ನಿಯಂತ್ರಣದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ, ಈ ಸ್ಪರ್ಧೆಯು ಮಕ್ಕಳಲ್ಲಿರುವ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಸಿ ಆರ್ ಪರಮೇಶ್ವರಪ್ಪ ತಿಳಿಸಿದರು.
ಅವರು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಶಿವಮೊಗ್ಗ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ, ರೋಟರಿ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಮತ್ತು ಇನ್ನರ್ ವೀಲ್ ಕ್ಲಬ್ ಶಿವಮೊಗ್ಗ ರಿವರ್ ಸೈಡ್ ಇವರ ಸಹಯೋಗದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಅಂಗವಾಗಿ ಬಿ ಹೆಚ್ ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಜಾಗೃತಿವಾಗಬೇಕು ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಡೆಂಗ್ಯೂ ಒಂದು ಮಾರಣಾಂತಿಕ ಕಾಯಿಲೆ, ಸ್ವಚ್ಛ ಪರಿಸರ ಹಾಗೂ ವೈಯಕ್ತಿಕ ಸ್ವಚ್ಛತೆಯಿಂದ ಡೆಂಗ್ಯೂ ನಿಯಂತ್ರಣಕ್ಕೆ ಸಹಕರಿಸಿ ಎಂದು ತಿಳಿಸದರು.
ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ಪ್ರಾಸ್ತಾವಿಕವಾಗಿ ಮಾತನಾಡುತ್ತ ಸ್ವಚ್ಛ ಪರಿಸರದಿಂದ ಮಾತ್ರ ಉತ್ತಮ ಆರೋಗ್ಯ ಸಾಧ್ಯ, ಪ್ರತಿಯೊಬ್ಬ ನಾಗರಿಕರು ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣದಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ದೀಪು ಅವರು ಮಾತನಾಡಿ ರವಿ ಕಾಣದ್ದನ್ನು ಕವಿ ಕಂಡ ಎನ್ನುವ ಹಾಗೆ ಮನುಷ್ಯ ಭಾವನೆ ಹಾಗೂ ಮಾತುಗಳ ಮೂಲಕ ವ್ಯಕ್ತಪಡಿಸಲು ಸಾದ್ಯವಾಗದ ವಿಷಯಗಳನ್ನು ಚಿತ್ರಕಲೆಯ ಮೂಲಕ ವ್ಯಕ್ತಪಡಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರೋಟರಿ ಮಾಜಿ ಅಸಿಸ್ಟಂಟ್ ಗವರ್ನರ್ ಜಿ ವಿಜಯಕುಮಾರ್, ರೋಟರಿ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷರಾದ ಆರ್ ದೇವೆಂದ್ರಪ್ಪ, ಕಾರ್ಯದರ್ಶಿ ಮಂಜು ಕರ್ನಲ್ಲಿ, ಇನ್ನರ್ ವೀಲ್ ಶಿವಮೊಗ್ಗ ರಿವರ್ ಸೈಡ್ ಅಧ್ಯಕ್ಷರಾದ ಸಹನಾ ಸತೀಶ್, ಕಾರ್ಯದರ್ಶಿ ಗಾಯಿತ್ರಿ, ನಿಕಟಪೂರ್ವ ಅಧ್ಯಕ್ಷರಾದ ಸೋಮಶೇಖರ್ ಎಲ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪ್ರತಿಮಾ ಡಾಕಪ್ಪ, ಚಿತ್ರಕಲಾ ಪರಿಷತ್ ಅಧ್ಯಕ್ಷ ದೀಪು, ರಾಜೇಂದ್ರ, ಸತೀಶ್ ಉಪಸ್ಥಿತರಿದ್ದರು.
ಶಿವಮೊಗ್ಗ ತಾಲ್ಲೂಕಿನ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.