ಶಿವಮೊಗ್ಗ: ಮನುಷ್ಯ ಸದಾ ಕಾಲ ಆರೋಗ್ಯದಿಂದ ಇರಬೇಕಾದರೆ ದೇಹದ ಎಲ್ಲ ಅಂಗಾAಗಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವ ಜತೆಯಲ್ಲಿ ಮೆದುಳಿನ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದು ಪ್ರಖ್ಯಾತ ನರರೋಗ ತಜ್ಞ ಡಾ. ಪ್ರಶಾಂತ್ ಹೇಳಿದರು.

ವಿಶ್ವ ಮೆದುಳು ದಿನ ಪ್ರಯುಕ್ತ ಶರಾವತಿ ನಗರದ ಆದಿಚುಂಚನಗಿರಿ ಪಿಯು ಕಾಲೇಜಿನಲ್ಲಿ ಜೆಸಿಐ ಶಿವಮೊಗ್ಗ ಸಹ್ಯಾದ್ರಿ ವತಿಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಒತ್ತಡ ನಿರ್ವಹಣೆ, ಸಮಯ ನಿರ್ವಹಣೆ, ಪರೀಕ್ಷಾ ಭಯ ಹೋಗಲಾಡಿಸುವುದು ಹಾಗೂ ವ್ಯಕ್ತಿತ್ವ ವಿಕಸನ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವು ನಮ್ಮ ಮೆದುಳನ್ನು ಉತ್ತಮವಾಗಿ ಆರೋಗ್ಯವಾಗಿ ಇಟ್ಟುಕೊಂಡಲ್ಲಿ ಎಲ್ಲ ಪರಿಸ್ಥಿತಿಗಳನ್ನು ಸಮರ್ಥವಾಗಿ ನಿಭಾಯಿಸಬಹುದಾಗಿದೆ. ಮೆದುಳು ಚೆನ್ನಾಗಿರಲು, ಉತ್ತಮ ಜೀವನಶೈಲಿ, ಒಳ್ಳೆಯ ಹವ್ಯಾಸಗಳು ಹಾಗೂ ಆಹಾರದಲ್ಲಿ ಕಡಿಮೆ ಎಣ್ಣೆ ಬಳಕೆ ಮಾಡುವುದು ಮತ್ತು ಹಣ್ಣು, ತರಕಾರಿ, ಮೊಳಕೆ ಕಾಳುಗಳನ್ನು ಬಳಸಿದಲ್ಲಿ ಮೆದುಳಿನ ಆರೋಗ್ಯ ಸುಧಾರಿಸುತ್ತದೆ ಎಂದು ತಿಳಿಸಿದರು.

ನಿಯಮಿತ ವ್ಯಾಯಾಮ, ಆರೋಗ್ಯಕರ ಜೀವನಶೈಲಿಯ ಭಾಗವಾಗಿದೆ. ಇದು ನಮ್ಮ ದೇಹವನ್ನು ಆರೋಗ್ಯಕರ ಆಗಿಸುತ್ತದೆ. ಮೆದುಳಿನ ಆಲೋಚನೆ ಮತ್ತು ಭಾವನಾತ್ಮಕ ಸಾಮಾರ್ಥ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಯಮಿತ ವ್ಯಾಯಾಮವು ಸ್ಮರಣೆಯನ್ನು ಸುಧಾರಿಸುತ್ತದೆ. ಆತಂಕ, ಖಿನ್ನತೆ ಮತ್ತು ಬುದ್ಧಿ ಮಾಂದ್ಯತೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಆರೋಗ್ಯಕರ ನಿದ್ರೆ, ಸರಿಯಾದ ವಿಶ್ರಾಂತಿ ಮಾಡುವುದು ಹಾಗೂ ಮಾದಕ ವಸ್ತುಗಳಿಂದ ದೂರವಿರುವುದು. ಇವುಗಳು ಮೆದುಳಿನ ಆರೋಗ್ಯವನ್ನು ಸದೃಢ ಆಗಿಸಲು ಸಹಕಾರಿ ಆಗಿಸುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬುವ ಜತೆಯಲ್ಲಿ ಪರೀಕ್ಷೆಯನ್ನು ಹೇಗೆ ಎದುರಿಸುವುದು ಮತ್ತು ವ್ಯಕ್ತಿತ್ವ ಹೇಗೆ ನಿರ್ಮಾಣ ಮಾಡಿಕೊಳ್ಳಬೇಕು ಎಂದು ಅನೇಕ ಸಲಹೆಗಳನ್ನು ನೀಡಿದರು.

ಜಾಗೃತಿ ಶಿಬಿರದಲ್ಲಿ ವಲಯ 11ರ ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್ ಮಾತನಾಡಿ, ಮನುಷ್ಯನ ಪ್ರತಿಯೊಂದು ಅಂಗಾAಗ ಚಲಿಸಲು ಮೆದುಳು ಕೆಲಸ ಮಾಡುತ್ತದೆ. ಇಂತಹ ಸಕರಾತ್ಮಕ ಕಾರ್ಯಕ್ರಮಗಳಿಂದ ಮೆದುಳಿನ ಆರೋಗ್ಯ ಉತ್ತಮವಾಗುತ್ತದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಹೇಳಿದರು.
ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ಜೆಸಿಐ ಸಂಸ್ಥೆ ಮೂಲ ಉದ್ದೇಶ ವ್ಯಕ್ತಿತ್ವ ನಿರ್ಮಾಣ ಮತ್ತು ತರಬೇತಿ ನೀಡುವುದು ಆಗಿದೆ. ಈಗಾಗಲೇ ಅನೇಕ ಕಾಲೇಜುಗಳಲ್ಲಿ ತರಬೇತಿ ಶಿಬಿರಗಳನ್ನು ಆಯೋಜಿಸಿದ್ದೇವೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು ಎಂದರು.
ಕಾಲೇಜಿನ ಪ್ರಾಚಾರ್ಯ ಗುರುರಾಜ್, ಜೆಸಿಐ ಪ್ರಮುಖರಾದ ಕಿಶೋರ್‌ಕುಮಾರ್, ಅನೂಪ್‌ಗೌಡ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…