ಶಿವಮೊಗ್ಗ: ಹುತಾತ್ಮ ಯೋಧರಿಗೆ ಗೌರವಾರ್ಪಣೆ, ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸುತ್ತಿರುವ ಸೈನಿಕರಿಗೆ ಗೀತೆಗಳ ಮೂಲಕ ನಮನ ಸಲ್ಲಿಸಲಾಯಿತು. ಪ್ರತಿಯೊಂದು ದೇಶಭಕ್ತಿ ಗೀತೆಯು ದೇಶಕ್ಕೆ ಸೈನಿಕರು ನೀಡಿರುವ ಕೊಡುಗೆ ಹಾಗೂ ಹುತಾತ್ಮ ಯೋಧರ ತ್ಯಾಗ, ಸಮರ್ಪಣಾ ಭಾವ ಪ್ರತಿಬಿಂಬಿಸಿತು.
ನಗರದ ಕುವೆಂಪು ರಂಗಮAದಿರದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಮಲ್ನಾಡ್ ಓಪನ್ ಗ್ರೂಪ್ ವತಿಯಿಂದ ೯ನೇ ವರ್ಷ ಆಯೋಜಿಸಿರುವ ತಾಯಿ ಭಾರತಿಗೆ ಗೀತೆಗಳ ಆರತಿ “ಗೀತ ಭಾರತಿ” ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಜರುಗಿತು.

ಅಮರ್ ಜವಾನ್‌ಗೆ ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ ಸುಬೇದಾರ್ ಲೂಯಿಸ್ ಪೆರಿಯನಾಯಗಂ ಅವರಿಗೆಂದ ಗೌರವಾರ್ಪಣೆ ಸಲ್ಲಿಸುವ ಮೂಲಕ ಆರಂಭಗೊAಡ ಕಾರ್ಯಕ್ರಮದ ಉದ್ದಕ್ಕೂ ದೇಶಭಕ್ತಿಯ ಪ್ರೇರಣೆ ಎಲ್ಲರಲ್ಲೂ ಮೂಡಿಸಿತು.
ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ ಸುಬೇದಾರ್ ಲೂಯಿಸ್ ಪೆರಿಯನಾಯಗಂ ಮಾತನಾಡಿ, ದೇಶದ ಸೇವೆಯೇ ಭಗವಂತನ ಸೇವೆ ಎಂದು ಸೈನ್ಯಕ್ಕೆ ಸೇರಿದೆ. ಬಾಲ್ಯದಿಂದಲೇ ಸೈನಿಕನಾಗಬೇಕೆಂಬ ಆಸೆಯಿಂದ ಅದಕ್ಕೆ ಬೇಕಾದ ಸಿದ್ಧತೆ ಏನೆಂಬುದನ್ನು ಅರಿತುಕೊಂಡು ಪ್ರಯತ್ನ ಮಾಡಲು ಆರಂಭಿಸಿದೆ. ಭಾರತೀಯ ಸೇನೆಗೆ ಸೇರಿದ ನಂತರ ಕಾಶ್ಮೀರದಲ್ಲೂ ಕೆಲಸ ಮಾಡುವ ಅವಕಾಶ ದೊರೆತಿತ್ತು. ಮಾತೃಭೂಮಿಯ ಸೇವೆ ಮಾಡಿದ ಪುಣ್ಯ ನನ್ನದು ಎಂದು ತಿಳಿಸಿದರು.

ಮಲ್ನಾಡ್ ಓಪನ್ ಗ್ರೂಪ್ ಸಮಿತಿ ಶಿವಮೊಗ್ಗ ಅಧ್ಯಕ್ಷ ಎಸ್.ಟಿ.ಶ್ರೀನಿವಾಸ ವರ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಚೇತನ್ ಸಿ.ರಾಯನಹಳ್ಳಿ ಹಾಗೂ ಮಲ್ನಾಡ್ ಓಪನ್ ತಂಡ ಹಾಗೂ ವಿದ್ಯಾರ್ಥಿಗಳು ಯಶಸ್ವಿಯಾಗಿ ಕಾರ್ಯಕ್ರಮದ ನಿರೂಪಣೆ ಮಾಡಿದರು.
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಆಯುಕ್ತ ( ವಯಸ್ಕ ಸಂಪನ್ಮೂಲ ) ಚಿನ್ನಸ್ವಾಮಿ ರೆಡ್ಡಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ಸಹಾಯಕ ನಿರ್ದೇಶಕ ಹೆಚ್.ಉಮೇಶ್, ಜಿಲ್ಲಾ ಸ್ಕೌಟ್ಸ್ ಆಯುಕ್ತ ಕೆ.ಪಿ.ಬಿಂದುಕುಮಾರ್, ಜಿಲ್ಲಾ ಗೈಡ್ಸ್ ಆಯುಕ್ತೆ ಶಕುಂತಲಾ ಚಂದ್ರಶೇಖರ್, ಜಿಲ್ಲಾ ಕಾರ್ಯದರ್ಶಿ ಹೆಚ್.ಪರಮೇಶ್ವರ, ಜಿಲ್ಲಾ ಖಜಾಂಚಿ ಚೂಡಾಮಣಿ ಇ.ಪವಾರ್, ತಂಡ ನಾಯಕ ರಾಜೇಶ್ ಅವಲಕ್ಕಿ, ಜಿ.ವಿಜಯ್‌ಕುಮಾರ್, ಭಾರತಿ, ಬಾಬು, ಆರ್.ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

ಮೇರಿ ಇಮಾಕ್ಯೂಲೇಟ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸಾವಿರ ದಳ ಕಮಲಿನಿ ಓ ಭಾರತಿ ಗೀತೆಯನ್ನು, ಕಸ್ತೂರ ಬಾ ಬಾಲಿಕಾ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾರತಾಂಬೆಯ ಹೆಮ್ಮೆಯ ಮಕ್ಕಳು ಗೀತೆ, ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ ವಿದ್ಯಾರ್ಥಿಗಳು ಹಿಂದೂಸ್ಥಾನವು ಎಂದೂ ಮರೆಯದ ಗೀತೆ, ಭಾರತೀಯ ವಿದ್ಯಾಭವನ ವಿದ್ಯಾರ್ಥಿಗಳು ಓ ತಾಯಿ ಭಾರತಿ, ಪಿಇಎಸ್ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಹೇ ವತನ್ ವತನ್ ಗೀತೆಯನ್ನು ಹಾಡಿದರು.

ಶ್ರೀ ಶಾರದಾ ದೇವಿಯ ಅಂಧರ ವಸತಿ ಶಾಲೆ ವಿದ್ಯಾರ್ಥಿಗಳು ಮಾತೆ ಪೂಜಕ ಗೀತೆ, ಜ್ಞಾನದೀಪ ಶಾಲೆ ವಿದ್ಯಾರ್ಥಿಗಳು ಏ ಮೇರೆ ವತನ್ ಕೆ ಲೋಗೋ ಗೀತೆ, ನ್ಯಾಷನಲ್ ಪಬ್ಲಿಕ್ ಶಾಲೆ ಮಕ್ಕಳಿಂದ ಈ ಮಣ್ಣು ನಮ್ಮದು ಗೀತೆ, ಮಂದಾರ ಜ್ಞಾನದಾಯಿನಿ, ಜೈನ್ ಪಬ್ಲಿಕ್ ಶಾಲೆ, ಮಲ್ನಾಡ್ ಓಪನ್ ಗ್ರೂಪ್ ತಂಡದ ಮಕ್ಕಳು ಸಹ ದೇಶ ಭಕ್ತಿಗೀತೆಗಳ ಗಾಯನ ನಡೆಸಿಕೊಟ್ಟರು. ಶಿವಮೊಗ್ಗ ನಗರದ ವಿವಿಧ ಶಾಲೆಗಳ ೮೫೦ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ವರದಿ ಮಂಜುನಾಥ್ ಶೆಟ್ಟಿ…