ಬೆಂಗಳೂರಿನ ನೈಟಿಂಗೇಲ್ (ಸೀಸನ್ 3), ಧ್ವನಿಗಳ ಅಂತಿಮ ಸುತ್ತಿನ ಸ್ಪರ್ಧೆಯು ಆಗಸ್ಟ್ 6 ರಂದು ಸುರಾನ ಕಾಲೇಜಿನಲ್ಲಿ (ಸ್ವಾಯತ್ತ) ರಸಮಯ ಸಂಗೀತ ಕಛೇರಿಯೊಂದಿಗೆ ಮುಕ್ತಾಯವಾಯಿತು.
ಎಸ್ ಎಸ್ ಎಂ ಆರ್ ವಿ ಕಾಲೇಜಿನ ಶ್ರೀ ರಕ್ಷಾ ಗೆಲುವಿನ ಕಿರೀಟ ತಮ್ಮದಾಗಿಸಿಕೊಂಡು, ರೂ. 25,000 ಬಹುಮಾನದ ಮೊತ್ತವನ್ನು ಪಡೆದರು. ಹಾಗೇ ಡಿಎಸ್ ಟಿ ಕಾಲೇಜಿನ ರಘೋತ್ತಮ್, ಮೊದಲ ರನ್ನರ್-ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಎನ್ ಎಂ ಕೆಆರ್ ವಿ ಕಾಲೇಜಿನ ರಚನಾ ಎರಡನೇ ರನ್ನರ್ ಅಪ್ ಪ್ರಶಸ್ತಿ ಪಡೆದರು.
ವಿಜೇತರಿಗೆ ನಗದು ಬಹುಮಾನಗಳನ್ನು ವಿತರಿಸಿದ ಸುರಾನಾ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನ ಅವರು “ವಿದ್ಯಾರ್ಥಿಗಳು ಓದಿನ ಜೊತೆಗೆ ಇತರೆ ಚಟುವಟಿಕೆಯಲ್ಲೂ ಭಾಗವಹಿಸಬೇಕು. ಇದು ಅವರ ಬೌದ್ಧಿಕ, ಮಾನಸಿಕ ಬೆಳವಣಿಗೆಗೆ ಸಹಾಯಕಾರಿಯಾಗಲಿದೆ” ಎಂದು ಹೇಳಿದರು.
ಸುರಾನ ಕಾಲೇಜಿನ ‘ನೈಟಿಂಗೇಲ್ ಆಫ್ ಬೆಂಗಳೂರು’ ವಾರ್ಷಿಕ ಪ್ರತಿಭಾ ಹುಡುಕಾಟದ ವೇದಿಕೆಯಾಗಿದ್ದು, ಅತ್ಯುತ್ತಮ ಸಂಗೀತಗಾರರಾಗಲು ಬಯಸುವ ಅಭ್ಯರ್ಥಿಗಳಿಗೆ ಇದು ಅವಕಾಶದ ಬಾಗಿಲನ್ನು ತೆರೆಯುತ್ತದೆ.
ಬೆಂಗಳೂರಿನ 38 ಕಾಲೇಜುಗಳಲ್ಲಿ ಸಂಸ್ಥೆವಾರು ಆಡಿಷನ್ಗಳ ನಂತರ, 12 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಭಾಗವಹಿಸಲು ಅವಕಾಶ ಪಡೆದರು. ಇನ್ನು ಈ ಟ್ಯಾಲೆಂಟ್ ಹಂಟ್ ವೇದಿಕೆಯಲ್ಲಿ, ಸಂಗೀತ ಸಂಯೋಜಕ ಮತ್ತು ಕೊನ್ನಕೋಲು ಕಲಾವಿದ ನಚಿಕೇತ ಶರ್ಮಾ, ವೃತ್ತಿಪರ ಬೀಟ್ ಬಾಕ್ಸರ್ ಹ್ಯಾರಿ ಡಿ ಕ್ರೂಜ್ ಮತ್ತು ಹಿನ್ನೆಲೆ ಗಾಯಕ ರೋಹಿತ್ ಗೌಡ ಅವರು ನಡೆಸಿಕೊಟ್ಟ ಗಾಲಾ ಸಂಗೀತ ಕಛೇರಿ ‘ರಾಗ ತರಂಗಿಣಿ’ಯೊಂದಿಗೆ ನೆರೆದವರ ಮನಸ್ಸಿಗೆ ಸಂಗೀತದ ತಂಪು ಉಣಬಡಿಸಿದರು.
“ಬೆಂಗಳೂರಿನ ನೈಟಿಂಗೇಲ್ ಅನೇಕ ಭರವಸೆಯ ಯುವ ಗಾಯಕರನ್ನು ಗುರುತಿಸಿ ಪ್ರೋತ್ಸಾಹಿಸುವುದರ ಜೊತೆಗೆ ಅವರ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ಅವಕಾಶವನ್ನು ನೀಡುತ್ತದೆ” ಎಂದು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಪೋಷಕರು ಖುಷಿಯಿಂದ ಹೇಳಿದರು. ಹಾಗೇ “ಸೀಸನ್ 1 ವಿಜೇತ ಶಿವಾನಂದ ಸಾಮ್ರಾಟ್ ಅವರು ತಮ್ಮ ಮೊದಲ ಆಲ್ಬಂ ‘ಲಾಸ್ಟ್ ಬೆಂಚ್ ಬಾಯ್ಸ್’ ಅನ್ನು ಬಿಡುಗಡೆ ಮಾಡಿದ್ದಾರೆ. ಮತ್ತು ಸೀಸನ್ 2 ವಿಜೇತೆ ನೇಹಾ ಮಂಜುನಾಥ್ ಹಿನ್ನೆಲೆ ಗಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ” ಎಂದು ವಿದ್ಯಾರ್ಥಿ ಪರಿಷತ್ತಿನ ಸಂಯೋಜಕಿ ಚಂದನಾ ಜೈನ್ ಹೇಳಿದರು.
ಸುರಾನ ಕಾಲೇಜು ಅನೇಕ ಸಂಗೀತಗಾರರು ಮತ್ತು ಕಲಾವಿದರಿಗೆ ನೆಲೆಯಾಗಿದೆ -ಚಲನಚಿತ್ರ ನಿರ್ದೇಶಕ ಪನ್ನಗಾಭರಣ, ವಾಸುಕಿ ವೈಭವ್, ಸಂಗೀತ ಸಂಯೋಜಕ ಮತ್ತು ನಟಿ ಹಾಗೂ ನೃತ್ಯಗಾರ್ತಿ ಅಪೂರ್ವ ಡಿ ಸಾಗರ್ ಅವರನ್ನು ಹೆಸರಿಸಬಹುದು.