ಶಿವಮೊಗ್ಗ: ಸಾಗುವಳಿ ರೈತರಿಗೆ ರಕ್ಷಣೆ ನೀಡಬೇಕು. ಕೋವಿಡ್ ನಿಂದ ಮರಣ ಹೊಂದಿದವರ ಕುಟುಂಬಕ್ಕೆ ಸರ್ಕಾರದ ಪರಿಹಾರ ನೀಡಬೇಕೆಂಬುದು ಸೇರಿದಂತೆ ಹಲವು ಉದ್ದೇಶಗಳನ್ನಿಟ್ಟುಕೊಂಡು ಸೊರಬದಲ್ಲಿ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಮಾಜಿ ಶಾಸಕ ಮಧು ಬಂಗಾರಪ್ಪ ಆಗ್ರಹಿಸಿದ್ದಾರೆ.
ಅವರು ಕಲ್ಲಿಹಳ್ಳಿಯ ತಮ್ಮ ನಿವಾಸದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರ್ಯೋತ್ಸವದ 75 ನೇವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ 75 ಕಿಮಿ ದೂರ ಕ್ರಮಿಸಬೇಕಿದ್ದು, ನಾಳೆ ಸೊರಬ ಪಟ್ಟಣದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದರು.ಬಿಜೆಪಿಯವರು ಅಂಬೇಡ್ಕರ್ ಸಂವಿಧಾನವನ್ನ ತಿದ್ದುಪಡಿ ಮಾಡಲು ಹೊರಟಿದ್ದಾರೆ. ರಾಷ್ಟ್ರಧ್ವಜದ ಬಗ್ಗೆ ಮಾತನಾಡುತ್ತಾರೆ. 150 ಕೋಟಿ ರೂ. ವೆಚ್ಚದಲ್ಲಿ ಧ್ವಜ ಹಂಚಲಾಗುತ್ತಿದೆ. ಧ್ವಜ ಹಂಚುವ ಶಕ್ತಿ ನೀಡಿದ್ದು ಮಹಾತ್ಮ ಗಾಂಧಿ. ಅದು ಅವರು ನೀಡಿದ ಕೊಡುಗೆ ಎಂದರು.ಮಧ್ಯಪ್ರದೇಶ, ಮಹಾರಾಷ್ಡ್ರ, ಗೋವಾದಲ್ಲಿ ಹಿಂಬದಿಯ ಬಾಗಿಲಿನಿಂದ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ. ಅಂದು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿದೆ. ಇಂದು ಬಿಜೆಪಿ ಮುಕ್ತ ರಾಜ್ಯ ಮಾಡುವ ಹೋರಾಟದ ಅವಶ್ಯಕತೆ ಇದೆ. ಅದಕ್ಕಾಗಿ ಹೋರಾಟ ಮಾಡಬೇಕಿದೆ ಎಂದ ಅವರು, ಮನೆ ಬಿದ್ದವರಿಗೆ ಪರಿಹಾರ ನೀಡಲು ಅಧಿಕಾರಿಗಳು ಹಿಂದು ಮುಂದೆ ನೋಡುತ್ತಿದ್ದಾರೆ. ಸರ್ಕಾರಕ್ಕೆ ಅಧಿಕಾರಿಗಳ ಮೇಲಿನ ನಿಯಂತ್ರಣ ಕಳೆದುಕೊಂಡಿದೆ. 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಕೋವಿಡ್ ನಿಂದ ಮರಣಹೊಂದಿದವರಿಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಿಂದ ವೈದ್ಯರು ಪ್ರಮಾಣ ಪತ್ರ ನೀಡಿದ್ದರೂ ಇನ್ನೂ ಪರಿಹಾರ ನೀಡಿಲ್ಲ. ಸೊರಬದಲ್ಲಿ 18 ಪ್ರಕರಣಗಳಿದ್ದು, ಆದರೆ, ಬಿಜೆಪಿ ಹಣ ಕೊಡದೇ ಪ್ರಚಾರ ಪಡೆದುಕೊಂಡಿದೆ ಎಂದು ದೂರಿದರು. ರಾಜ್ಯ ಸರ್ಕಾರ 1.5 ಲಕ್ಷ ರೂ. ಪರಿಹಾರ ನೀಡಬೇಕಿದೆ. ಕೇಂದ್ರ ಸರ್ಕಾರ ಸಹ ಹಣ ಕೊಡಬೇಕಿದೆ. ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುತ್ತಾರೆ. ಯುವಕರನ್ನ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಜಮೀನಿನಲ್ಲಿ ಕಟ್ಟಿಕೊಂಡಿದ್ದರೆ ಅವರಿಗೆ ಭೂಗಳ್ಳರು ಎಂದು ಹಣೆಪಟ್ಟಿ ಹಚ್ಚಲಾಗುತ್ತಿದೆ ಎಂದು ಟೀಕಿಸಿದರು.ಅರಣ್ಯ ಸಮಿತಿಗೆ ಅರ್ಜಿ ಹಾಕಿದವರಿಗೆ ಸಾಗುವಳಿ ಪತ್ರ ನೀಡಿಲ್ಲ. ಹಸಿರು ಪೀಠ ಏನು ಮಾಡುತ್ತಿದೆ ಎಂದು ಕೋರ್ಟ್ ವಿರುದ್ಧವೇ ಗುಡುಗಿದರು. 94 ಸಿ, 94 ಸಿಸಿ ರದ್ದುಮಾಡಲು ಬಿಜೆಪಿ ಚಿಂತಿಸುತ್ತಿದೆ. ಯಾವುದೇ ಕಾರಣಕ್ಕೂ ಅರಣ್ಯ ಸಾಗುವಳಿ ಮಾಡುತ್ತಿರುವ ರೈತರನ್ನಒಕ್ಕಲೆಬ್ಬಿಸಬಾರದು ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಶಿವಮೊಗ್ಗದಲ್ಲಿ ಹಿಂದೆ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ವಿನಾಕಾರಣ ರೈತರನ್ನು ಓಡಾಡದ ಹಾಗೆ ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ರೈತರಿಗೆ ಬಲವಂತದ ತೆರವು ಅಥವಾ ಜೈಲು ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಸಂಸದರೂ ಒಂದು ವರ್ಷ ಯಾರೂ ರೈತರ ತಂಟೆಗೆ ಬಾರದ ಹಾಗೆ ಕೇಂದ್ರದ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದರು. ಆದರೆ, ನಿರಂತರವಾಗಿ ರೈತರಿಗೆ ನೋಟಿಸ್ ಗಳನ್ನು ನೀಡಿ ಜೈಲಿಗೆ ಕಳಿಸುವ ಹುನ್ನಾರ ನಡೆದಿದೆ. ಡಬಲ್ ಇಂಜಿನ್ ಸರ್ಕಾರ ರೈತರ ಹಿತ ಕಾಪಾಡುವಲ್ಲಿ ನಿರ್ಲಕ್ಷ್ಯ ತೋರಿದೆ ಎಂದರು.ನನ್ನನ್ನ ಪಕ್ಷದ ಪ್ರಣಾಳಿಕೆ ಸಮಿತಿಯ ಉಪಾಧ್ಯಕ್ಷನಾಗಿ ನೇಮಕ ಮಾಡಲಾಗಿದೆ. ರಾಜ್ಯದ ಪ್ರಣಾಳಿಕೆ ಜೊತೆಗೆ ಜಿಲ್ಲಾವಾರು ಪ್ರಣಾಳಿಕೆ ಪ್ರತ್ಯೇಕವಾಗಿ ರಚಿಸಲು ತೀರ್ಮಾನಿಸಿದ್ದೇನೆ. ಈಗಾಗಲೇ ಚಿಂತನ ಮಂಥನದಲ್ಲಿ ಸಲಹೆ, ಅಭಿಪ್ರಾಯ ಪಡೆಯಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಆರ್. ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಡಾ. ಶ್ರೀನಿವಾಸ ಕರಿಯಣ್ಣ, ರಮೇಶ್ ಶಂಕರಘಟ್ಟ, ಜಿ.ಡಿ. ಮಂಜುನಾಥ್, ಎನ್. ರಮೇಶ್, ಕಲಗೋಡು ರತ್ನಾಕರ್, ಉದಯಕುಮಾರ್ ಶೆಟ್ಟಿ ಮೊದಲಾದವರಿದ್ದರು.