ಶಿವಮೊಗ್ಗ: ರೈತರ ಉತ್ಪನ್ನಗಳಿಗೆ ಬೆಲೆ ಸ್ವಾತಂತ್ರ್ಯದ ಚಳವಳಿಯನ್ನು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಹಮ್ಮಿಕೊಂಡಿದ್ದು ಇದರ ಅಂಗವಾಗಿ ಆ. 12 ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕಚೇರಿಗಳ ಮುಂದೆ ರೈತ ಚಳವಳಿ ಆರಂಭಿಸಲಾಗುವುದು ಎಂದು ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.

ಅವರು ಇಂದು ರೈತಸಂಘದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶ 76 ನೇ ಸ್ವಾತಂತ್ರ್ಯೋತ್ಸವಕ್ಕೆ ಸಜ್ಜಾಗಿದೆ. ರೈತರನ್ನು ಬಿಟ್ಟು ರಾಜಕಾರಣಿಗಳು, ರಾಜಕೀಯ ಕೃಪಾಪೋಷಿತರು, ಕೈಗಾರಿಕೆಗಳ ಮಾಲೀಕರು, ವರ್ತಕರು, ನೌಕರಶಾಹಿಗಳು ಸಂಭ್ರಮಿಸುತ್ತಿದ್ದಾರೆ. ಅವರಿಗೆಲ್ಲ ರೈತ ಅಗ್ಗದ ಬೆಲೆಯಲ್ಲಿ ಅವರ ಅಗತ್ಯಗಳನ್ನು ಪೂರೈಸಿ ಸಾಲದ ಸುಳಿಗೆ ಸಿಲುಕಿದ್ದಾನೆ. ರೈತರಿಗೆ ನಿಜವಾಗಿಯೂ ಸ್ವಾತಂತ್ರ್ಯ ಸಿಕ್ಕಿಲ್ಲ. ಹಾಗಾಗಿಯೇ ನಮ್ಮ ಬೆಳೆಗಳಿಗೆ ಬೆಲೆಯಾದರೂ ಬರಲಿ ಎಂಬ ನಿಟ್ಟಿನಲ್ಲಿ ಬೆಲೆ ಸ್ವಾತಂತ್ರ್ಯ ಚಳವಳಿ ಆರಂಭಿಸಿದ್ದೇವೆ. ಆ. 12 ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಲಿದೆ ಎಂದರು.

ರೈತರಿಗೆ ಬೆಲೆ ಸಿಗದೇ ಹೋದರೆ ನೂತನ ರೀತಿಯ ಚಳವಳಿ ಆರಂಭಿಸಲು ಹೊರಟಿದ್ದೇವೆ. ಸಾಲ ಕೊಟ್ಟ ಬ್ಯಾಂಕ್ ಗಳಿಗೆ ವಿದ್ಯುತ್ ಕಟ್ಟಲು, ಕಂದಾಯ ಕಟ್ಟಲು  ನಾವು ಹಣ ಕೊಡುವುದಿಲ್ಲ. ಅದರ ಬದಲು ರೈತ ಬೆಳೆದ ಬೆಳೆಗಳನ್ನೇ ಅವರಿಗೆ ನೀಡುತ್ತೇವೆ. ಪೊಲೀಸರು ನಮಗೆ ದಂಡ ಹಾಕಿದರೂ ನಾವು ಹಣ ಕಟ್ಟದೇ ಬೆಳೆಯನ್ನೇ ನೀಡುತ್ತೇವೆ. ಹಣಕ್ಕೆ ಪರ್ಯಾಯವಾಗಿ ರೈತರಿಗೆ ಲಾಭಾಂಶವುಳ್ಳ ಬೆಲೆಗೆ ಜಮಾ ಹಾಕುವ ಮೂಲಕ ರೈತರ ಉತ್ಪನ್ನಗಳಿಗೆ ಬೆಲೆ ಸ್ವಾತಂತ್ರ್ಯದ ಚಳವಳಿ ಆರಂಭಿಸುತ್ತೇವೆ ಎಂದರು.ಕಾರ್ಖಾನೆಯ ಉತ್ಪಾದನೆಗಳಂತೆ ರೈತರ ಉತ್ಪನ್ನಗಳಿಗೂ ಬೆಲೆ ಭದ್ರತೆ ಕಾಯ್ದೆ ಜಾರಿಯಾಗಬೇಕು. ಕೃಷಿ ಬೆಲೆ ಆಯೋಗದ ಮಾರ್ಗದರ್ಶಿಯಲ್ಲಿಯೇ ಬೆಲೆ ಭದ್ರತೆ ಕಾಯ್ದೆ ಇರಬೇಕು. ಇಲ್ಲಿವರೆಗೂ ಬೆಲೆಯ ಮೋಸದಿಂದಾಗಿ ರೈತರ ಮೇಲೆ ಬಂದಿರುವ ಎಲ್ಲಾ ಸಾಲಗಳ ಹೊಣೆಗಾರಿಕೆಯನ್ನು ಸರ್ಕಾರಗಳೇ ಹೊರಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಲು ಕರೆ ನೀಡಿದೆ. ಇದು ಸಂತೋಷ. ಆದರೆ, ದೇಶ ಪ್ರೇಮದ ಹೆಸರಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನವಾಗುವುದನ್ನು ನಾವು ಒಪ್ಪುವುದಿಲ್ಲ. ಸಾಲಗಾರರಾದ ನಮ್ಮ ಮನೆಗಳ ಮೇಲೆ ಬಾವುಟ ಹಾರಿಸುವುದಕ್ಕಿಂತ ಬೆಲೆ ಸಿಗುವಂತೆ ಸರ್ಕಾರಗಳು ಯೋಚಿಸಬೇಕು ಎಂದ ಅವರು, ರಾಷ್ಟ್ರಧ್ವಜ ಮೊದಲು ಖಾದಿ ಬಟ್ಟೆಯಲ್ಲಿ ತಯಾರಾಗುತ್ತಿತ್ತು. ಅದಕ್ಕೊಂದು ನಿಯಮವೂ ಇತ್ತು. ಆದರೆ, ಬೇರೆ ಬೇರೆ ಕಾರಣಕ್ಕಾಗಿ ರಾಷ್ಟ್ರಧ್ವಜ ಹಾರಾಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವುದು ಸರಿಯಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಹಿಟ್ಟೂರು ರಾಜು, ಟಿ.ಎಂ. ಚಂದ್ರಪ್ಪ, ಬಿ.ಎಂ. ಚಿಕ್ಕಸ್ವಾಮಿ, ಕೆ. ರಾಘವೇಂದ್ರ, ಎಸ್. ಶಿವಮೂರ್ತಿ, ರುದ್ರೇಶ್, ಸಿ. ಚಂದ್ರಪ್ಪ ಇದ್ದರು.

ವರದಿ ಮಂಜುನಾಥ್ ಶೆಟ್ಟಿ…