ಶಿವಮೊಗ್ಗ; ನೆಹರೂ ಸ್ಟೇಡಿಯಂ ಎದುರು ಹಾಕಿ ಕ್ರೀಡಾಂಗಣಕ್ಕಾಗಿ ಕಾರ್ಯ ವಿಧಾನ ಮತ್ತು ನಿಯಮಗಳನ್ನು ಪಾಲಿಸದೇ ಸ್ಮಾರ್ಟ್ ಸಿಟಿಗೆ ಆರ್ಥಿಕ ನಷ್ಟ ಉಂಟು ಮಾಡಿದ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಠಾರೆ ಅವರಿಂದ ವಸೂಲಾತಿಗೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.
ನೆಹರೂ ಸ್ಟೇಡಿಯಂ ಎದುರು ಹಾಕಿ ಕ್ರೀಡಾಂಗಣಕ್ಕಾಗಿ ಕಾರ್ಯವಿಧಾನ ನಿಯಮಗಳನ್ನು ಪಾಲಿಸದೇ ರದ್ದಾದ ಕಾಮಗಾರಿಯಿಂದ ಸ್ಮಾರ್ಟ್ ಸಿಟಿಗೆ 13,80,325 ರೂ. ಟಾಟಾ ಕನ್ಸಲ್ಟೆನ್ಸಿ ಅವರಿಗೆ ನೀಡಿದ ಶುಲ್ಕ 13,16,329 ರೂ. ಟೆಂಟರ್ ಕರೆದಿರುವ ವೆಚ್ಚ 63,996 ರೂ. ಆರ್ಥಿಕ ನಷ್ಟವುಂಟಾಗಿದೆ. ಇದಕ್ಕೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಚಿದಾನಂದ ವಠಾರೆ ಅವರೇ ಜವಾಬ್ದಾರರಾಗಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ. ಈ ಕಾಮಗಾರಿಗೆ ಆಡಳಿತಾತ್ಮಕ ಒಪ್ಪಿಗೆ ಫೆಬ್ರವರಿ 2020 ರಲ್ಲಿ ನೀಡಲಾಗಿದೆ. ಕಾಮಗಾರಿಗೆ ಟೆಂಡರ್ ಅನ್ನು 10,02,2020 ರಂದು ಕರೆಯಲಾಗಿದೆ. ಟೆಂಡರ್ ಕರೆದ ಮೇಲೆ ಈ ಕಾಮಗಾರಿ ಅನುಮತಿ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ 18,03,2020 ರಂದು ಕರೆಯಲಾಗಿದೆ.
ಈ ಕಾಮಗಾರಿಯ ಅಂದಾಜುಪಟ್ಟಿ ತಯಾರಿಕೆಗೆ ಮೊದಲು ತೆಗೆದುಕೊಳ್ಳಬೇಕಾದ ತಾಂತ್ರಿಕ ವರದಿಯನ್ನು 13,08,2020 ರಂದು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸಭೆಯ ನಂತರ ಪಡೆಯಲಾಗಿದೆ. ಈ ಕಾಮಗಾರಿಯ ಅಂದಾಜುಪಟ್ಟಿ ತಯಾರಿಕೆಗೆ ಮೊದಲು ತೆಗೆದುಕೊಳ್ಳಬೇಕಾದ ಅಗ್ನಿಶಾಮಕದಳ ಅನುಮತಿ ಪಡೆದೇ ಇಲ್ಲ. 6.01.2020 ರಂದು ನಡೆದ ಸಭೆಯಲ್ಲಿ ಈ ಕಾಮಗಾರಿಗೆ ಮೊದಲು ಈ ಜಾಗವನ್ನು ಇಲಾಖೆಗೆ ಹಸ್ತಾಂತರಿಸಿಕೊಳ್ಳಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ, ಜಾಗ ಹಸ್ತಾಂತರಿಸಿಕೊಳ್ಳದೇ ಕಾಮಗಾರಿ ಮುಂದುವರೆಸಲಾಗಿದೆ ಎಂದು ದೂರಿದರು.ಈ ಎಲ್ಲಾ ವೈಫಲ್ಯಗಳು ಸ್ಮಾರ್ಟ್ ಸಿಟಿ ನಿರ್ವಹಣೆ ಕ್ರಮಬದ್ಧವಾಗಿ ಆಗದೇ ಇರುವುದರಿಂದ ಕಾಮಗಾರಿ ರದ್ದಾಗಿದೆ.
ಹಾಗಾಗಿ ಈ ಯೋಜನೆ ತೆಗೆದುಕೊಳ್ಳುವ ಮೊದಲು ಕ್ರಮಬದ್ಧವಾಗಿ ಕಾರ್ಯನಿರ್ವಹಿಸದೇ ಕಾಮಗಾರಿ ರದ್ದಾಗಿ ಸ್ಮಾರ್ಟ್ ಸಿಟಿಗೆ 13,80,325 ರೂ. ಟಾಟಾ ಕನ್ಸಲ್ಟೆನ್ಸಿ ಅವರಿಗೆ ನೀಡಿದ ಶುಲ್ಕ 13,16,329 ರೂ. ಮತ್ತು ಟೆಂಡರ್ ಕರೆದಿರುವ ವೆಚ್ಚ 63,996 ರೂ. ಆರ್ಥಿಕ ನಷ್ಟವುಂಟಾಗಿದೆ. ಹಾಗಾಗಿ ಈ ಹಣವನ್ನು ಚಿದಾನಂದ ವಠಾರೆಯವರಿಂದ ವಸೂಲಾತಿಗೆ ಸರ್ಕಾರಕ್ಕೆ ಶಿಫಾರಸು ಮಾಡಲು ಮನವಿಯಲ್ಲಿ ಆಗ್ರಹಿಸಿದ್ದಾರೆ.ಪ್ರತಿಭಟನೆಯಲ್ಲಿ ಕೆ.ವಿ. ವಸಂತಕುಮಾರ್, ಸತೀಶ್ ಕುಮಾರ್ ಶೆಟ್ಟಿ, ಸೀತಾರಾಂ, ಚನ್ನವೀರಪ್ಪ, ಮನೋಹರ್ ಗೌಡ, ಜನಮೇಜಿರಾವ್, ವೆಂಕಟನಾರಾಯಣ್ ಮೊದಲಾದವರಿದ್ದರು.