ಶಿವಮೊಗ್ಗ: ಕಳೆದ ಬಾರಿ ಮೇ ತಿಂಗಳಲ್ಲಿ ಭಾರಿ ಮಳೆಯ ಕಾರಣ ನಗರದಲ್ಲಿ 47 ಮನೆಗಳು ಬಿದ್ದಿದ್ದು, ಅಷ್ಟೂ ಮನೆಗೆ ತಲಾ 95 ಸಾವಿರ ರೂ. ನೀಡಲಾಗಿದೆ. ಸಂಪೂರ್ಣ ಬಿದ್ದ ಮನೆಗಳಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಶೇಷಾದ್ರಿಪುರಂನಲ್ಲಿ ಮಳೆಯಿಂದ ಕುಸಿದು ಬಿದ್ದ ಮನೆಗಳ ಪರಿಶೀಲನೆ ನಡೆಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಶೇಷಾದ್ರಿಪುರಂ, ಬಾಪೂಜಿ ನಗರ, ಹುಚ್ಚರಾಯ ಕಾಲೋನಿಯಲ್ಲಿ 8 ಮನೆಗಳು ಬಿದ್ದಿವೆ. ಇನ್ನೂ ಮಳೆಯಾಗುತ್ತಿರುವುದರಿಂದ ಮೂರ್ನಾಲ್ಕು ದಿನಗಳಲ್ಲಿ ಪರಿಶೀಲನೆ ನಡೆಸಿ ಸಂತ್ರಸ್ಥರಿಗೆ ಪರಿಹಾರ ನೀಡಲಾಗುವುದು. ಕೆಲವೊಂದು ಅನಧಿಕೃತ ಮನೆಗಳಿವೆ. ದಾಖಲಾತಿ ಪ್ರಕಾರ ಆ ಮನೆಗಳಿಗೆ ಪರಿಹಾರ ನೀಡಲು ಬರುವುದಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಮತ್ತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಅವರಿಗೂ ಪರಿಹಾರ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದರು.

ಕಳೆದ ಬಾರಿ ಬಿದ್ದ ಮನೆಗಳಿಗೆ ತುರ್ತಾಗಿ ಪಾಲಿಕೆ ವತಿಯಿಂದ 25 ಸಾವಿರ ರೂ. ನೀಡಲಾಗಿತ್ತು. ಈ ಬಾರಿ ಕೂಡ ವಿಶೇಷ ಸಭೆ ಕರೆದು ಪಾಲಿಕೆಯಿಂದ ಅನುದಾನ ನೀಡಲಾಗುವುದು. ಪ್ರವಾಹ ಸಂತ್ರಸ್ಥರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಮತ್ತು ಆಹಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ವತಿಯಿಂದ ರಾಜಾ ಕಾಲುವೆಗಳನ್ನು ಸ್ವಚ್ಚಗೊಳಿಸಿದ್ದರಿಂದ ಈ ಬಾರಿ ಕೆಲವೊಂದು ಪ್ರದೇಶಗಳಲ್ಲಿ ನೀರು ನುಗ್ಗಿಲ್ಲ ಎಂದರು.

ಸ್ಮಾರ್ಟ್ ಸಿಟಿ ಕಾಮಗಾರಿಗೆ ವಿರೋಧ ಮತ್ತು ಕಳಪೆ ಕಾಮಗಾರಿಗಳ ಬಗ್ಗೆ ದೂರು ಕೇಳಿ ಬರುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಅನೇಕ ಕಡೆ ಕಾಮಗಾರಿ ಉತ್ತಮವಾಗಿದೆ. ಅನೇಕ ಕಡೆ ದೂರುಗಳು ಕೂಡ ಬಂದಿವೆ. ಸರಿಯಾಗದ ಕಡೆ ಸರಿಪಡಿಸುವ ಜವಾಬ್ದಾರಿ ಅಧಿಕಾರಿಗಳಿಗೆ ಈಗಾಗಲೇ ನೀಡಿದ್ದು, ತಕ್ಷಣವೇ ಸ್ಪಂದಿಸಿ ಲೋಪ ಸರಿಪಡಿಸುವಂತೆ ಸೂಚಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಜ್ಞಾನೇಶ್ವರ್, ಚನ್ನಬಸಪ್ಪ, ಸೂಡಾ ಅಧ್ಯಕ್ಷ ನಾಗರಾಜ್ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…