ಶಿವಮೊಗ್ಗ; ಸಂಸ್ಕೃತ ದೇವ ಭಾಷೆ, ಅದು ಸುಂದರವಾದ ಸಂಸ್ಕರಿಸಿದ ಭಾಷೆ, ಇದನ್ನು ಎಲ್ಲರೂ ಕಲಿಯಬೇಕು ಎಂದು ಮಾಜಿ ವಿಧಾನ ಪರಿಷತ್ ಸಭಾ ಸದಸ್ಯ ಎಮ್.ಬಿ. ಭಾನುಪ್ರಕಾಶ್ ತಿಳಿಸಿದರು.
ಅವರು ಬುಧವಾರ ಸಂಜೆ ಕೋಟೆ ಪೋಲಿಸ್ ಠಾಣೆಯ ರಸ್ತೆಯಲ್ಲಿರುವ ಚಂಡಿಕ ದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ಸಂಸ್ಕೃತ ಭಾರತಿ, ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಮತ್ತು ದೇವಾಲಯದ ವತಿಯಿಂದ ಐದು ವರ್ಷಗಳ ಒಳಗಿನ ಮಕ್ಕಳಿಗೆ ಏರ್ಪಡಿಸಿದ್ದ ಸುಭಾಷಿತ ಕಂಠಪಾಠ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಎಲ್ಲರೂ ಸಂಸ್ಕೃತವನ್ನು ಕಲಿಯಬೇಕು, ಈ ಭಾಷೆಯಲ್ಲಿ ಸಂಸ್ಕೃತಿಯ ಸೊಗಡಿದೆ, ಭಾರತ ದೇಶದ ಎರಡು ಪ್ರಮುಖಗಳಲ್ಲಿ ಸಂಸ್ಕೃತಿ ಮತ್ತು ಸಂಸ್ಕೃತ ಸೇರಿದೆ, ಸಂಸ್ಕೃತ ಕಲಿತರೆ ಸಂಸ್ಕೃತಿ ತಾನಾಗಿಯೇ ತಿಳಿಯುತ್ತದೆ. ಮಕ್ಕಳಿಗೆ ಬಾಲ್ಯದಲ್ಲಿಯೇ ಸಂಸ್ಕೃತ ಕಲಿಸಬೇಕು ಎಂದು ಪೋಷಕರಿಗೆ ಕರೆ ನೀಡಿದರು. ಸಂಸ್ಕೃತ ಕಲಿತರೆ ಇತರೇ ಭಾಷೆ ಕಲಿಯಲು ಸುಲಭವಾಗುತ್ತದೆ, ಭಾರತದ ವೈಶಿಷ್ಟ್ಯಗಳನ್ನು ತಿಳಿಯಬೇಕಾದರೆ ಪ್ರತಿಯೊಬ್ಬರೂ ಸಂಸ್ಕೃತ ಕಲಿಯಲೇ ಬೇಕು ಎಂದು ತಿಳಿಸಿದರು.
ಸುಭಾಷಿತಗಳು ನಮಗೆ ಉತ್ತಮವಾದ ಜೀವನವನ್ನು ನಡೆಸಲು ಸಹಕಾರಿಯಾಗುತ್ತದೆ, ಚಿಕ್ಕ ಚಿಕ್ಕ ಮಕ್ಕಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಪಟ್ಟಾಭಿರಾಮ್, ಚಂಡಿಕ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಶಂಕರಾನಂದ ಜೊಯಿಸ್, ಸಂಸ್ಕೃತ ಭಾರತಿ ಶಿವಮೊಗ್ಗ ಜಿಲ್ಲೆಯ ಸಂಯೋಜಕ ಟಿ.ವಿ.ನರಸಿಂಹ ಮೂರ್ತಿ, ಶಿವಮೊಗ್ಗ ನಗರ ಸಂಯೋಜಕಿ ಪ್ರೇಮಾ ವಿಜಯಕುಮಾರ್, ವಿದ್ವಾನ್ ಮಹೀಪತಿ ಎಸ್ ಜೊಯಿಸ್, ಉಪಸ್ಥಿತರಿದ್ದರು.