ಶಿವಮೊಗ್ಗ: ಶಿವಮೊಗ್ಗ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿಯು ಪ್ರಸಕ್ತ ಸಾಲಿನಲ್ಲಿ 37 ಕೋ.ರೂ.ಗಳಷ್ಟು ನಿವ್ವಳ ಲಾಭಗಳಿಸಿದ್ದು, 2021-22ನೇ ಸಾಲಿನ ಆಡಿಟ್ ವರ್ಗೀಕರಣದಲ್ಲಿ `ಬಿ’ ತರಗತಿಯ ಶ್ರೇಣಿಯನ್ನು ಪಡೆದಿದೆ ಎಂದು ಸೊಸೈಟಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ತಿಳಿಸಿದರು.
ಅವರು ಇಂದು ಮೀಡಿಯಾ ಹೌಸ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸೊಸೈಟಿಯು ಅನೇಕ ಏಳುಬೀಳುಗಳನ್ನು ಕಂಡು ಅಭಿವೃದ್ಧಿ ಹೊಂದುತ್ತಿದ್ದು, 2024ರಲ್ಲಿ ಶತಮಾನೋತ್ಸವದ ಹೊಸ್ತಿಲಿಗೆ ಕಾಲಿಡುತ್ತಿದೆ. ಶತಮಾನೋತ್ಸವವನ್ನು ಅತಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದರು.
ಸೊಸೈಟಿಯಿಂದ 1962ರಿಂದ 2000ವರೆಗೆ ಜಯನಗರ, ರವೀಂದ್ರನಗರ, ರಾಜೇಂದ್ರನಗರ, ಗಾಂಧಿನಗರ ಮತ್ತು ಇಂದಿರಾಗಾಂಧಿ ಬಡಾವಣೆಗಳೆಂಬ ಸುಂದರವಾದ 5 ಬಡಾವಣೆಗಳನ್ನು ನಿರ್ಮಿಸಿ ಸುಮಾರು 1500ಕ್ಕಿಂತ ಹೆಚ್ಚು ನಿವೇಶನಗಳನ್ನು ಅತಿ ಕಡಿಮೆ ದರದಲ್ಲಿ ವಿತರಿಸಲಾಗಿದೆ. ಸೊಸೈಟಿಯ ವಶದಲ್ಲಿರುವ ರವೀಂದ್ರನಗರದ ಬಡಾವಣೆಯಲ್ಲಿನ 326ರ ನಿವೇಶನದಲ್ಲಿ 12 ಮನೆಗಳ ವಸತಿ ಸಮುಚ್ಚಯವನ್ನು 4.50 ಕೋ.ರೂ.ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕಾನೂನಿನಂತೆ ಲೇಬರ್ ಕಾಂಟ್ರಾಕ್ಟ್ ಆಧಾರದ ಮೇಲೆ ಕಟ್ಟಡದ ಕಾಮಗಾರಿ ಕೆಲಸ ಆರಂಭ ಮಾಡಲಾಗಿದೆ ಎಂದರು.
ರಾಜ್ಯ ಸಹಕಾರ ಸಂಘಗಳ ನಿಬಂಧಕರ ಆದೇಶದನ್ವಯ ಗಾಂಧಿನಗರ ಹಾಗೂ ರಾಜೇಂದ್ರನಗರದಲ್ಲಿ ಸೊಸೈಟಿಯಲ್ಲಿ ಬಾಕಿ ಉಳಿದಿರುವ 9 ನಿವೇಶನಗಳನ್ನು ಪಾರದರ್ಶಕವಾಗಿ ಹರಾಜು ಮಾಡಲಾಗಿದೆ. ಹರಾಜಿನಿಂದ 2.98 ಕೋ.ರೂ, ಜಮಾ ಆಗಿದ್ದು, ಇದರಲ್ಲಿ 75ಲಕ್ಷ ರೂ. ವರಮಾನ ತೆರಿಗೆ ಇಲಾಖೆಗೆ ಜಮಾ ಮಾಡಿದ್ದು, ಉಳಿದ ಹಣದಲ್ಲಿ ವಸತಿ ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತಿದೆ ಎಂದರು.
ಸೊಸೈಟಿಯು ಸ್ವಂತ ಬಂಡವಾಳದಿಂದ ಇಲ್ಲಿಯವರೆಗೆ 2.23 ಕೋ.ರೂ. ಮನೆ ರಿಪೇರಿ ಸಾಲವನ್ನು ನೀಡಿದ್ದು, ರಿಪೇರಿ ಸಾಲದ ಬಡ್ಡಿ ದರವನ್ನು 2021ರ ಡಿಸೆಂಬರ್ ನಂತರ ಸಾಲ ಪಡೆದ ಸದಸ್ಯರಿಗೆ ಶೇ.13ರಿಂದ 11ಕ್ಕೆ ಇಳಿಕೆ ಮಾಡಲಾಗಿದೆ. ಸಾಲದ ಸುಸ್ತಿ ಪ್ರಮಾಣ ಕಳೆದ ಬಾರಿ ಶೇ. 15.74ರಷ್ಟಿದ್ದು, ಈ ಬಾರಿ ಶೇ.13.50ರಷ್ಟಾಗಿ ಶೇ.2.24ರಷ್ಟು ಕಡಿಮೆಯಾಗಿದೆ ಎಂದರು.
ಸೊಸೈಟಿಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಆ.28ರಂದು ಬೆಳಿಗ್ಗೆ 11ಗಂಟೆಗೆ ರವೀಂದ್ರನಗರದ ಶ್ರೀ ಪ್ರಸನ್ನಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಸೊಸೈಟಿಯ ಸದಸ್ಯರು ನಿಧನ ಹೊಂದಿದ್ದ ಸಂದರ್ಭದಲ್ಲಿ ಮೃತರ ವಾರಸುದಾರರಿಗೆ 2000 ರೂ. ನೀಡಲಾಗುತ್ತಿದೆ. ಈ ಮೊತ್ತವನ್ನು ಹೆಚ್ಚಿಸಲು ಆ.14ರಂದು ಬೆಳಿಗ್ಗೆ 11ಗಂಟೆಗೆ ಕೋಟೆ ಮಾರಿಕಾಂಬ ದೇವಸ್ಥಾನದ ಸಮುದಾಯ ಭವನದಲ್ಲಿ ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶರುಗಳಾದ ಡಾ.ಶ್ರೀನಿವಾಸ್ ಕರಿಯಣ್ಣ, ರಾಘವೇಂದ್ರ, ಕೆ.ರಂಗನಾಥ್, ಎಸ್.ಪಿ.ಶೇಷಾದ್ರಿ, ಸಿ.ಹೊನ್ನಪ್ಪ, ಉಮಾ ಶಂಕರ ಉಪಾಧ್ಯ, ನಿರ್ಮಲಾ ಕಾಶಿ, ದಾಕ್ಷಾಯಿಣಿ, ನಟರಾಜ ಶಾಸ್ತ್ರೀ, ಟಿ.ವಿ.ರಂಜಿತ್, ಪ್ರಕಾಶ್ ಇನ್ನಿತರರು ಉಪಸ್ಥಿತರಿದ್ದರು.