ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾವು ಸಂಸದರಾದ ಮೇಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳನ್ನ ಕೈಗೊಂಡಿದ್ದು, ಹಲವು ಕಾಮಗಾರಿಗಳು ಮುಗಿದಿವೆ. ಕೆಲವು ನಡೆಯುತ್ತಿವೆ. ಕೆಲವು ನಡೆಯಲಿವೆ. ಒಟ್ಟಾರೆ ತಮ್ಮ ಕ್ಷೇತ್ರದಲ್ಲಿ ಸಾವಿರಾರು ಕೋಟಿ ಮೌಲ್ಯದ ಕಾಮಗಾರಿಗಳು ನಿರಂತರವಾಗಿ ನಡೆಯುತ್ತಿವೆ ಎಂದರು.
ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ಮಾರ್ಗದ ಹೊಸ ರೈಲುಮಾರ್ಗಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಸುಮಾರು 535 ಕೋಟಿ ವೆಚ್ಚದ ಕಾಮಗಾರಿ ಇದು. ಸ್ವಾತಂತ್ರ್ಯದ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಹೊಸ ರೈಲಮಾರ್ಗ ಪ್ರಾರಂಭವಾದದ್ದು ಇದೇ ಮೊದಲು ಇದು 30ಕ್ಕೂ ಹೆಚ್ಚು ಹಳ್ಳಿಗಳನ್ನು ಸಂಪರ್ಕಿಸುತ್ತಿದೆ. ಈಗಾಗಲೇ ಸುಮಾರು 555 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ರೈತರಿಗೆ ಪರಿಹಾರ ಕೂಡ ನೀಡಲಾಗಿದೆ. ಇದಕ್ಕಾಗಿ 125 ಕೋಟಿ ರೂ. ವೆಚ್ಚ ಮಾಡಲಾಗಿದೆ. 30 ತಿಂಗಳ ಅವಧಿಯೊಳಗೆ ರೈಲುಮಾರ್ಗ ಸಿದ್ಧವಾಗಲಿದೆ ಎಂದರು.
ಇದು ಮಲೆನಾಡು ಮತ್ತು ಬಯಲುಸೀಮೆಯನ್ನು ಸಂಪರ್ಕಿಸುವ ರೈಲುಮಾರ್ಗವಾಗಿದ್ದು, ಸುಮಾರು 10 ರಾಜ್ಯಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಹಾಗೆಯೇ ಹೊಸದಾಗಿ ರಾಷ್ಟ್ರೀಯ ಹೆದ್ದಾರಿಗಳ ಬೈಪಾಸ್‍ಗಳನ್ನು ಕೂಡ ನಿರ್ಮಿಸಲಾಗುತ್ತಿದೆ. ತೀರ್ಥಹಳ್ಳಿ, ಭಾರತೀಪುರ, ಹೊಸನಗರ, ಬೈಂದೂರು, ಸಿಗಂದೂರು ಹೀಗೆ ವಿವಿಧ ಸಂಪರ್ಕ ರಸ್ತೆಗಳನ್ನು ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ. ಜೊತೆಗೆ ವಿಮಾನ ನಿಲ್ದಾಣದ ಕೆಲಸ ಭರದಿಂದ ಸಾಗಿದೆ. ಡಿಸೆಂಬರ್ ಅಂತ್ಯಕ್ಕೆ ವಿಮಾನ ಹಾರಾಟದ ನಿರೀಕ್ಷೆ ಇದೆ. ಮಾವಿನಕೊಪ್ಪದಿಂದ ಆಡಗೋಡಿಯವರೆಗೆ ಉಪರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುವುದು. ಒಟ್ಟಾರೆ 7 ಸಾವಿರ ಕೋಟಿಗೂ ಹೆಚ್ಚು ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿಗಳ, ಬೈಪಾಸ್‍ಗಳ, ಸಂಪರ್ಕ ರಸ್ತೆಗಳ ನಿರ್ಮಾಣವಾಗುತ್ತಿದೆ ಎಂದರು.
ಇದರ ಜೊತೆಗೆ ಕೊಲ್ಲೂರಿನಲ್ಲಿ ಮೆಟ್ಟಿಲು ನಿರ್ಮಾಣ, ಸಿಗಂದೂರಿನಲ್ಲಿ ಸೇತುವೆ ನಿರ್ಮಾಣ, ಶಿಕಾರಿಪುರದ ಶರಣರ ಕೇಂದ್ರದಲ್ಲಿ ಅಭಿವೃದ್ಧಿ, ಭದ್ರಾವತಿ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಅಭಿವೃದ್ಧಿ, ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಸಹ ಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಪ್ರಮುಖರಾದ ಶ್ರೀನಾಥ್, ಶಿವರಾಜ್, ಜಗದೀಶ್, ಮಧುಸೂದನ್, ಹೃಷಿಕೇಶ್ ಪೈ, ಕೆ.ವಿ. ಅಣ್ಣಪ್ಪ ಮುಂತಾದವರಿದ್ದರು.