ಶಿವಮೊಗ್ಗ: ಒಂದು ದೇಶ ದಾಸ್ಯದಿಂದ ಮುಕ್ತವಾಗಿ ಸ್ವಾತಂತ್ರ್ಯ ಪಡೆದು ಪ್ರಜಾಪ್ರಭುತ್ವದ ನೆಲೆಯಲ್ಲಿ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಜಾಗತಿಕ ಇತಿಹಾಸದಲ್ಲಿ ಬೆರಗುಗೊಳಿಸುವ ಸಂಗತಿಯಾಗಿದೆ. ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ 75 ಜನರಿಂದ ರಕ್ತದಾನ ಶಿಬಿರವನ್ನು ಬಸವ ಕೇಂದ್ರದಲ್ಲಿ ಆ. 15 ರಂದು ಆಯೋಜಿಸಲಾಗಿದೆ ಎಂದು ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.
ಅವರು ಇಂದು ನಗರದ ಬಸವಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಹಿರಿಯರು ದೇಶದ ಸ್ವಾತಂತ್ರ್ಯಕ್ಕಾಗಿ ರಕ್ತ ಬೆವರು ಬದುಕನ್ನೇ ಸಮರ್ಪಿಸಿದ್ದಾರೆ. ಅವರು ಕೊಟ್ಟ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನಮ್ಮ ರಕ್ತ ಎಂಬ ಅಮೃತ ನೀಡಿ ಅರ್ಥಪೂರ್ಣವಾಗಿಸೋಣ. ಅಂದು ನಿಮ್ಮೊಂದಿಗೆ ನಾವೂ ರಕ್ತ ನೀಡಲಿದ್ದೇವೆ ಎಂದರು.ಸಾರ್ವಜನಿಕರೂ ರಕ್ತ ನೀಡಿ. ಒಂದು ಯುನಿಟ್ ರಕ್ತ ನಾಲ್ಕು ಜನರಿಗೆ ಬಿಳಿರಕ್ತಕಣಗಳು, ಕೆಂಪು ರಕ್ತಕಣಗಳು, ಹಿಮೋಗ್ಲೋಬಿನ್, ಪ್ಲಾಸ್ಮಾ ಎಂದು ಭಾಗವಾಗಿ- ಅನುಕೂಲವಾಗುತ್ತದೆ. ಅಲ್ಲದೇ ರಕ್ತದಾನ ಮಾಡುವುದರಿಂದ ನಮ್ಮ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳು ಆಗುವುದಿಲ್ಲ. ಬದಲಿಗೆ ರಕ್ತ ಪಡೆದವನ ಜೀವ ಉಳಿಯುತ್ತದೆ. ಈ ಕಾರಣದಿಂದ ರಕ್ತ ಅಮೃತವಿದ್ದಂತೆ. ಆದ್ದರಿಂದ ನಮ್ಮ ದೇಶದ ಸ್ವಾತಂತ್ರ್ಯದ ಅಮೃತಮಹೋತ್ಸವಕ್ಕೆ ಅಮೃತ ಕೊಟ್ಟ ತೃಪ್ತಿ ನಮ್ಮ ನಿಮ್ಮದಾಗಲಿ ಎಂದರು.
ಬಸವ ಕೇಂದ್ರದ ಈ ಸಂಕಲ್ಪ ಸಾಕಾರಗೊಳಿಸಲು ನಮ್ಮೊಂದಿಗೆ,ಸಂಜೀವಿನಿ ಬ್ಲಡ್ ಬ್ಯಾಂಕ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಎಲ್ಲ ಘಟಕಗಳು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಎಲ್ಲ ಘಟಕಗಳು, ಅಕ್ಕನ ಬಳಗ ಮೊದಲಾದ ಸಂಘ ಸಂಸ್ಥೆಗಳು, ಹಲವು ಯುವಕರು ಕೈಜೋಡಿಸಲಿದ್ದಾರೆ ಎಂದರು. ಸ್ವಾತಂತ್ರ್ಯ ಪಡೆದ ತಕ್ಷಣ ನಮ್ಮಿಂದ ಬೇರೆಯಾಗಿ ನಮ್ಮಂತೆಯೇ ಸ್ವತಂತ್ರ ದೇಶವಾದ ಪಾಕಿಸ್ಥಾನದಲ್ಲಿನ ಅಸ್ಥಿರತೆ ಆಹಾಕಾರಗಳನ್ನು ಗಮನಿಸಿದರೆ, ನಮಗೆ ಸ್ವಾತಂತ್ರ ತಂದುಕೊಟ್ಟು ಈ ದೇಶಕ್ಕೆ ಭದ್ರವಾದ ಆಡಳಿತ, ಸಂಸದೀಯ ವ್ಯವಸ್ಥೆ, ಆರ್ಥಿಕ ವ್ಯವಸ್ಥೆ, ಸಂಸ್ಕೃತಿಯ ಸಂಸ್ಕಾರದ ಭದ್ರವಾದ ಅಸ್ಥಿಭಾರ ಹಾಕಿಕೊಟ್ಟ ನಮ್ಮ ಹಿರಿಯರ ಬಗೆಗೆ ನಮಗೆಲ್ಲ ಹೆಮ್ಮೆಯಾಗಬೇಕು. ಈ ಕಾರಣದಿಂದ ನಮ್ಮ ದೇಶ ಇತರೆ ದೇಶಗಳಿಗೆ ಮಾದರಿಯಾಗುತ್ತದೆ ಎಂದರು.ರಕ್ತದಾನ ಮಾಡುವ ಆಸಕ್ತರು 98443 81292 ಸಂಪರ್ಕಿಸಬಹುದು.
ಪತ್ರಿಕಾಗೋಷ್ಠಿಯಲ್ಲಿ ಬಸವ ಕೇಂದ್ರದ ಅಧ್ಯಕ್ಷ ಜಿ ಬೆನಕಪ್ಪ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ರುದ್ರಮುನಿ ಎನ್ ಸಜ್ಜನ್, ವೀರಶೈವ ಲಿಂಗಾಯತ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಜಿ. ವಿಜಯಕುಮಾರ್, ಬಸವಕೇಂದ್ರದ ಉಪಾಧ್ಯಕ್ಷ ಪಿ. ಚಂದ್ರಪ್ಪ ಕಾರ್ಯದರ್ಶಿ ಚಂದ್ರಶೇಖರ ತಳಗಿಹಾಳ, ಯುವ ಮುಖಂಡ ಧೃವಕುಮಾರ್ ಮತ್ತಿತರರು ಇದ್ದರು