ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಬಿಜೆಪಿ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಯಾವ ಕಾರ್ಯಕ್ರಮ ಹಮ್ಮಿಕೊಂಡರೂ, ಟೀಕಿಸುತ್ತಾ ಬಂದಿರುವ ಅವರು ಕೇಂದ್ರ ಸರ್ಕಾರದ ಸ್ವಾತಂತ್ರ್ಯ ಅಮೃತ ಮಹೋತ್ಸವ ಟೀಕಿಸುವ ಭರದಲ್ಲಿ ರಾಷ್ಟ್ರಧ್ವಜವನ್ನು ಅವಮಾನಿಸಿದ್ದಾರೆ ಎಂದರು. ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಷ್ಟ್ರಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣದ ಬದಲಾಗಿ ಕೆಂಪು, ಬಿಳಿ ಹಸಿರು ಎಂದು ಹೇಳಿಕೆ ನೀಡಿ ನಗೆಪಾಟಲಿಗೀಡಾಗಿದ್ದಾರೆ. ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಬಿಜೆಪಿಗರ ರಾಷ್ಟ್ರಭಕ್ತಿ ಬಗ್ಗೆ ಪ್ರಶ್ನೆ ಮಾಡುವ ಅಧಿಕಾರ ಕಾಂಗ್ರೆಸಿಗರಿಗಿಲ್ಲ. ಅವರು ಮೊದಲು ತ್ರಿವರ್ಣಧ್ವಜದ ಬಗ್ಗೆ ಅಭ್ಯಾಸ ವರ್ಗ ಮಾಡಲಿ ಎಂದರು.ಹರ್ ಘರ್ ತಿರಂಗಾ ಅಭಿಯಾನದಲ್ಲಿ ರಾಜಕೀಯ ಬೇಡ. ರಾಷ್ಟ್ರಭಕ್ತಿಯ ಪ್ರತಿರೂಪವಾದ ತಿರಂಗಾದ ಬಗ್ಗೆ ಗೌರವ ಇಲ್ಲದ್ದರಿಂದ ಕಾಂಗ್ರೆಸ್ ನವರು ವಿಧಾನ ಪರಿಷತ್ ನಲ್ಲಿ ಧ್ವಜ ಹಿಡಿದು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.
ಕಲಾಪ ನಡೆಯಲು ಬಿಡಲಿಲ್ಲ. ವ್ಯಾಪಕ ಟೀಕೆಗೆ ಗುರಿಯಾದ ಮೇಲೆ ರಾಷ್ಟ್ರಧ್ವಜ ಬಿಟ್ಟು ಪ್ರತಿಭಟನೆ ಮುಂದುವರೆಸಿದ್ದರು. ಅವರ ನಾಯಕರಾದ ನೆಹರೂ ಅವರು ದೇಶವನ್ನು ತುಂಡು ಮಾಡಿದವರು. ಈಗ ನೆಹರೂ ವಂಶಸ್ಥ ರಾಹುಲ್ ಗಾಂಧಿ ಬಾರತ್ ಜೋಡೋ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ದೇಶ ವಿಭಜಕರಿಂದ ಭಾರತ್ ಜೋಡೋ ಯಾತ್ರೆ ದುಃಖದ ಸಂಗತಿ ಎಂದರು.ಎಸಿಬಿ ರದ್ದು ಮಾಡಿದ ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇವೆ. ಈ ತೀರ್ಪಿನಿಂದ ಲೋಕಾಯುಕ್ತಕ್ಕೆ ಬಲ ಬಂದಿದೆ. ಸಿದ್ಧರಾಮಯ್ಯ ಅವರು ಅವರ ಕಾಲದಲ್ಲಿ ಭ್ರಷ್ಟಾಚಾರ ಮುಚ್ಚಿಡಲು ಲೋಕಾಯುಕ್ತ ದುರ್ಬಲಗೊಳಿಸಿ ಎಸಿಬಿ ರಚಿಸಿದ್ದರು. ನಮ್ಮ ಸರ್ಕಾರ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತದೆ. ಭ್ರಷ್ಟರ ಬಗ್ಗೆ ಕ್ರಮ ಕೈಗೊಳ್ಳುತ್ತದೆ. ಪ್ರಣಾಳಿಕೆಯಲ್ಲಿ ಭರವಸೆ ನೀಡಿ ಎಸಿಬಿ ರದ್ದುಪಡಿಸಿಲ್ಲ ಎಂಬ ಕಾಂಗ್ರೆಸ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿ, ನ್ಯಾಯಾಲಯದಲ್ಲಿ ಪ್ರಕರಣ ಇದ್ದ ಕಾರಣ ಬಿಜೆಪಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುವ ಹಾಗಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ದೇಶಾದ್ಯಂತ ಅಭೂತಪೂರ್ವ ಸ್ಪಂದನೆ ದೊರೆತಿದ್ದು, ಪ್ರತಿಯೊಬ್ಬ ನಾಗರಿಕರು ಸಂಭ್ರಮದಿಂದ ಭಾಗವಹಿಸುತ್ತಿದ್ದಾರೆ. ವಿಶ್ವದಲ್ಲಿ ಭಾರತದ ಬಗ್ಗೆ ಹಿಂದುಳಿದ ರಾಷ್ಟ್ರ ಮತ್ತು ಬಡ ರಾಷ್ಟ್ರ ಎಂಬ ಕೀಳರಿಮೆ ಇತ್ತು. ಮೋದಿ ಪ್ರಧಾನಿಯಾದ ನಂತರ ಇಂದು ವಿಶ್ವದ ರಾಷ್ಟ್ರಗಳು ಭಾರತದ ಮಾರ್ಗದರ್ಶನ ಬಯಸುತ್ತಿವೆ ಎಂದರು.ಪ್ರತಿ ಮನೆಯಲ್ಲಿ ಧ್ವಜ ಹಾರಿಸಿ ಈ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು. ಕೆಲವೊಂದು ವಾರ್ಡ್ ಗಳಲ್ಲಿ ಇನ್ನೂ ಧ್ವಜ ವಿತರಣೆಯಾಗಿಲ್ಲ. ಮತ್ತು ಧ್ವಜದ ಬಗ್ಗೆ ಕೆಲವು ಲೋಪವಿರುವ ಬಗ್ಗೆ ದೂರುಗಳು ಬರುತ್ತಿವೆ ಎಂಬ ಪ್ರಶ್ನೆಗೆ ಜನರಲ್ಲಿ ಜಾಗೃತಿ ಉಂಟಾಗಿರುವುದು ಸಂತೋಷದ ಸಂಗತಿ. ದೇಶ ಭಕ್ತಿ ರಾಷ್ಟ್ರಧ್ವಜದ ಬಗ್ಗೆ ಆಟೋ ಚಾಲಕರು, ಕೂಲಿ ಕಾರ್ಮಿಕರು ಸೇರಿದಂತೆ ಕಟ್ಟ ಕಡೆಯ ವ್ಯಕ್ತಿ ಕೂಡ ಆಸಕ್ತಿ ವಹಿಸಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಸಂತೋಷ ತಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಜಗದೀಶ್, ನಾಗರಾಜ್, ಕೆ.ಇ. ಕಾಂತೇಶ್, ಚನ್ನಬಸಪ್ಪ, ಮೋಹನ್ ರೆಡ್ಡಿ, ಶಿವರಾಜ್, ಬಾಲು ಮೊದಲಾದವರಿದ್ದರು.