ಶಿವಮೊಗ್ಗ: 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಹಾಯಧನದ ಅನುದಾನದ ಅಡಿಯಲ್ಲಿ ನಿರ್ಮಾಣಗೊಂಡಿರುವ ಕಿಯೋಸ್ಕ್ ಹಣ್ಣು ತರಕಾರಿ ಮಾರಾಟ ಮಳಿಗೆಯ ಉದ್ಘಾಟನಾ ಸಮಾರಂಭ ಆ. 16 ಮತ್ತು 17 ರಂದು ಕ್ರಮವಾಗಿ ಶಿಕಾರಿಪುರ ಮತ್ತು ನಡೆಯಲಿದೆ ಎಂದು ಹಾಪ್ ಕಾಮ್ಸ್ ಜಿಲ್ಲಾಧ್ಯಕ್ಷ ಎನ್.ಎಂ. ಸೋಮಶೇಖರಪ್ಪ ಹೇಳಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆ. 16 ರಂದು ಬೆಳಗ್ಗೆ 11 ಗಂಟೆಗೆ ಶಿಕಾರಿಪುರದ ಬಸ್ ನಿಲ್ದಾಣದ ಹತ್ತಿರ ನೂತನವಾಗಿ ನಿರ್ಮಾಣಗೊಂಡಿರುವ ಹಾಪ್ ಕಾಮ್ಸ್ ಮಾರಾಟ ಮಳಿಗೆಯನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಎಂ.ಎ.ಡಿ.ಬಿ. ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಕೆ.ಹೆಚ್.ಎಫ್. ಅಧ್ಯಕ್ಷ ಡಾ.ಬಿ.ಡಿ. ಭೂಕಾಂತ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದರು.ಆ. 17 ರಂದು ಶಿವಮೊಗ್ಗದ ಪಿ.ಅಂಡ್ ಟಿ ಕ್ವಾಟ್ರಸ್ ಎದುರಿನ ಕುವೆಂಪು ರಸ್ತೆಯಲ್ಲಿ ನಿರ್ಮಾಣವಾಗಿರುವ ಮಾರಾಟ ಮಳಿಗೆಯನ್ನು ಶಾಸಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಜಿಲ್ಲಾ ಉಸ್ತುವಾರಿ ಕೆ.ಸಿ. ನಾರಾಯಣಗೌಡ, ಸಂಸದ ಬಿ.ವೈ. ರಾಘವೇಂದ್ರ ಹಾಗೂ ಜಿಲ್ಲೆಯ ಎಲ್ಲಾ ಶಾಸಕರು, ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಹಾಪ್ ಕಾಮ್ಸ್ ಉಪಾಧ್ಯಕ್ಷ ಕೆ.ಜೆ. ನಾಗೇಶ್ ನಾಯ್ಕ್ ಮಾತನಾಡಿ, ಹಾಪ್ ಕಾಮ್ಸ್ ತೋಟಗಾರಿಕೆ ಇಲಾಖೆಯ ಒಂದು ಅಂಗಸಂಸ್ಥೆಯಾಗಿದೆ. ಬೆಳಗಾರರಿಂದ ಬಳಕೆದಾರರಿಗೆ ಎಂಬ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ವಿಸ್ತಾರಗೊಂಡಿದ್ದು, ಸುಮಾರು 3 ಸಾವಿರ ಸದಸ್ಯರನ್ನು ಹೊಂದಿದೆ. ಶಿವಮೊಗ್ಗ ಸೇರಿದಂತೆ ಇತರ ಕಡೆಗಳಲ್ಲಿ 22 ಮಾರಾಟ ಮಳಿಗೆಗಳಿವೆ. ವಾರ್ಷಿಕ 2 -3 ಕೋಟಿ ರೂ. ವ್ಯವಹಾರ ನಡೆಸಿ ಸಂಸ್ಥೆ ಲಾಭದಾಯಕವಾಗಿದೆ ಎಂದರು.ಜಿಲ್ಲೆಯ ಹಣ್ಣು ಮತ್ತು ತರಕಾರಿ ಬೆಳೆಗಾರರ ಹಿತದೃಷ್ಠಿಯನ್ನಿಟ್ಟುಕೊಂಡು ಹೆಚ್ಚಿನ ಮಾರುಕಟ್ಟೆ ಒದಗಿಸಿಕೊಡುವ ಯೋಜನೆಗೆ ಹಾಪ್ ಕಾಮ್ಸ್ ಬದ್ಧವಾಗಿದ್ದು, ಈ ಹಿನ್ನಲೆಯಲ್ಲಿ ಶಿಕಾರಿಪುರ ಮತ್ತು ಶಿವಮೊಗ್ಗದಲ್ಲಿ ಹೊಸ ಮಳಿಗೆಗಳನ್ನು ಸ್ಥಾಪಿಸಲಾಗುತ್ತದೆ. ಅಷ್ಟೇ ಅಲ್ಲ ಮಹಾನಗರ ಪಾಲಿಕೆಯಿಂದ ಮಂಜೂರಾದ 25 ಖಾಲಿ ಜಾಗಗಳಲ್ಲಿ ಮಳಿಗೆಗಳನ್ನು ನಿರ್ಮಿಸಿ ವ್ಯವಹಾರಕ್ಕೆ ತೊಡಗಿಸಿಕೊಳ್ಳಲಾಗುವುದು ಎಂದರು.ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಅವರ ಅನುದಾನದ ಅಡಿಯಲ್ಲಿ ಈಗಾಗಲೇ ನಿರ್ಮಿಸಿರುವ ಜಿಲ್ಲೆಯ ಒಟ್ಟು 13 ಮಾರಾಟ ಮಳಿಗೆಗಳನ್ನು ಹಾಪ್ ಕಾಮ್ಸ್ ಗೆ ಹಸ್ತಾಂತರಿಸಲು ಗ್ರಾಪಂನವರಿಗೆ ನಿರ್ದೇಶನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಆ ಮಳಿಗೆಗಳನ್ನು ಸಹ ಹಾಪ್ ಕಾಮ್ಸ್ ವತಿಯಿಂದ ನಿರ್ವಹಣೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಾಪ್ ಕಾಮ್ಸ್ ನಿರ್ದೇಶಕರಾದ ಡಾ.ಬಿ.ಡಿ. ಭೂಕಾಂತ್, ಉಂಬ್ಳೇಬೈಲ್ ಮೋಹನ್, ಡಿ.ಜಿ. ಕುಮಾರಸ್ವಾಮಿ, ಡಿ.ಸಿ. ನಿರಂಜನಕುಮಾರ್, ವ್ಯವಸ್ಥಾಪಕ ಉಮೇಶ್ ಇದ್ದರು.