ಸರ್ಕಾರಿ ಬಸ್ ಗಳ ನಿಲುಗಡೆ ಮಾಡುತ್ತಿಲ್ಲ ಎಂದು ಬಸ್ ತಡೆದು ಪ್ರತಿಭಟನೆ ನಡೆಸಿರುವ ಘಟನೆ ಶಿವಮೊಗ್ಗ ಹೊರವಲಯದ ಮಲವಗೊಪ್ಪ ಬಳಿ ಇಂದು ನಡೆದಿದೆ.

ಶಿವಮೊಗ್ಗ ಹೊರವಲಯದ ಮಲವಗೊಪ್ಪ, ನಿದಿಗೆ ಹಾಗೂ ಸಕ್ಕರೆ ಕಾರ್ಖಾನೆ ಸ್ಟಾಪ್ ಬಳಿ ಯಾವುದೇ ಸರ್ಕಾರಿ ಬಸ್ ಗಳನ್ನು ನಿಲ್ಲಿಸುತ್ತಿಲ್ಲ.ಇದರಿಂದಾಗಿ ಶಾಲಾ-ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಜೊತೆಗೆ ಕೆಲಸ- ಕಾರ್ಯಗಳಿಗೆ ತೆರಳುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಶಿವಮೊಗ್ಗ – ಭದ್ರಾವತಿ ನಗರದ ಮಧ್ಯೆ ಸಂಚರಿಸುವ ಸರ್ಕಾರಿ ಬಸ್ ಗಳು ಭದ್ರಾವತಿಯಲ್ಲಿಯೇ ಭರ್ತಿಯಾಗುತ್ತಿದ್ದು, ಮಲವಗೊಪ್ಪ, ನಿದಿಗೆ ಭಾಗದ ಜನರಿಗೆ ಸಮಸ್ಯೆಯಾಗುತ್ತಿದೆ.

ಕೆಲವೊಮ್ಮೆ ಬಸ್ ನಿಲ್ಲಿಸಿದರೂ ಕೂಡ ಬಸ್ ಭರ್ತಿಯಾದ ಕಾರಣಕ್ಕೆ ವಿದ್ಯಾರ್ಥಿಗಳು ಬಸ್ ನ ಡೋರ್ ಬಳಿ ನಿಂತು ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯರು ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇನ್ನೂ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಎಸ್ಆರ್ಟಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಗಳು, ಗ್ರಾಮಸ್ಥರು, ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದ್ದಾರೆ. ಇನ್ನೂ ಪ್ರತಿಭಟನಾನಿರತನ್ನು ಮನವೊಲಿಸಿದ ಅಧಿಕಾರಿಗಳು ತ್ವರಿತವಾಗಿ ಬಸ್ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಶಶಿಕುಮಾರ್, ಸಂತೋಷ್, ಗಿರೀಶ್, ಸತೀಶ್ ಹಾಗೂ ಮಲವಗೊಪ್ಪ ಭಾಗದ ವಿದ್ಯಾರ್ಥಿಗಳು & ಗ್ರಾಮಸ್ಥರು ಭಾಗಿಯಾಗಿದ್ದರು.

ವರದಿ ಪ್ರಜಾಶಕ್ತಿ…