ಶಿವಮೊಗ್ಗ: ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದ್ದು, ಎಲ್ಲರೂ ಸಂತೋಷದಿಂದ ಹಬ್ಬವನ್ನು ಆಚರಿಸಬೇಕು.ಇನ್ನೊಬ್ಬರೊಂದಿಗೆ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಬೇಕೆ ಹೊರತೂ ಯಾರಿಗೂ ನೋವುಂಟು ಮಾಡಬಾರದು ಎಂದು ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಬಿ.ಎಂ.ಲಕ್ಷ್ಮಿಪ್ರಸಾದ್ ಹೇಳಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ವತಿಯಿಂದ ನಗರದ ಮೀಡಿಯಾ ಹೌಸ್ ನಲ್ಲಿ ಇಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾಧಿಕಾರಿ ಡಾ.ಅರ್.ಸೆಲ್ವಮಣಿ…
ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಮಾತನಾಡಿ, ಗೌರಿಗಣೇಶ ಹಬ್ಬದ ಹಿನ್ನೆಲೆಯಲ್ಲಿ ಧಾರ್ಮಿಕ ಮುಖಂಡರುಗಳೊಂದಿಗೆ ಈಗಾಗಲೇ ಜಿಲ್ಲೆಯ ವಿವಿಧಡೆ ಸಭೆ ನಡೆಸಿ ಚರ್ಚಿಸಿದ್ದೇವೆ. ಆಗಸ್ಟ್ 31 ರಂದು ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಹಾಗೂ ಸಿದ್ಧತೆ ಕೈಗೊಳ್ಳಲಾಗಿದೆ. ಹೆಚ್ಚಿನ ಸಿಸಿಟಿವಿಗಳನ್ನು ಅಳವಡಿಸುವಂತೆ ಹಾಗೂ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಸಿಸಿಟಿವಿ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಲ್ಲಾ ಕಡೆ ವಿಡಿಯೋ ರೆಕಾರ್ಡ್ ಮಾಡಲು ಸಿದ್ಧತೆ ನಡೆಸಲಾಗಿದೆ ಎಂದರು.
ಹಬ್ಬದ ಸಂದರ್ಭದಲ್ಲಿ ಯಾರಿಗೂ ನೋವುಂಟು ಮಾಡಬಾರದು. ಎರಡು ವರ್ಷದಿಂದ ಕೊರೋನಾ ಕಾರಣಕ್ಕೆ ಹಬ್ಬದ ಆಚರಣೆಯಲ್ಲಿ ಸಂಭ್ರಮವಿರಲಿಲ್ಲ. ಈ ಬಾರಿ ಎಲ್ಲರೂ ನಿಯಮಾನುಸಾರ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಸಣ್ಣ ಪುಟ್ಟ ವ್ಯತ್ಯಾಸಗಳು ಸಹಜ ಭಿನ್ನಾಭಿಪ್ರಾಯವಿದ್ದಾಗ ಮುಖಂಡರು ಸಮಸ್ಯೆಯನ್ನು ಬಗೆಹರಿಸಬೇಕು. ಊರಿನಲ್ಲಿ ಹಿರಿಯರು ಯುವಕರಿಗೆ ಅಗತ್ಯವಾದ ಸಲಹೆ ಸೂಚನೆ ಮಾರ್ಗದರ್ಶನ ನೀಡಿ ತಿಳಿ ಹೇಳಬೇಕು ಎಂದರು.
ಸೆಕ್ಷನ್ 144 ಜಾರಿಯಾಗಿರುವ ಬಗ್ಗೆ ಯಾವುದೇ ಆತಂಕ ಬೇಡ. ನಿಷೇಧಾಜ್ಞೆ ಸಂದರ್ಭದಲ್ಲಿ ಏನು ಮಾಡಬೇಕು ಏನು ಮಾಡಬಾರದು ಎಂಬುದರ ಬಗ್ಗೆ ಸೂಚನೆ ಇದೆ ಇಂತಹ ಸೂಚನೆಗಳನ್ನು ಎಲ್ಲರೂ ಪಾಲಿಸಬೇಕು. ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಡಳಿತ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮಿ ಪ್ರಸಾದ್…
ಜಿಲ್ಲಾ ಪೊಲೀಸ್ ಅಧೀಕ್ಷಕ ಬಿ.ಎಂ. ಲಕ್ಷ್ಮಿಪ್ರಸಾದ್ ಮಾತನಾಡಿ, ಶಿವಮೊಗ್ಗ ನಗರದಲ್ಲಿ ಇತ್ತೀಚೆಗೆ ನಡೆದ ಘಟನೆ ನಂತರ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಹಬ್ಬ ಆಚರಿಸಲು ಯಾರಿಗೂ ಯಾವುದೇ ಭಯ ಭೀತಿ ಬೇಡ. ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲರೂ ಹರ್ಷದಿಂದ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಿ ಎಂದು ಹೇಳಿದರು.
ಶಿವಮೊಗ್ಗ, ಭದ್ರಾವತಿ, ಸಾಗರ ಸೇರಿದಂತೆ ಜಿಲ್ಲೆಯ ಹಲವೆಡೆ ಶಾಂತಿ ಸಮಿತಿ ಸಭೆಗಳನ್ನು ಮಾಡಲಾಗಿದೆ. ಗಣಪತಿ ಮಂಡಳಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಹೊರಗಿನಿಂದಲೂ ಬಂದೋಬಸ್ತ್ ಗೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಗಣಪತಿ ಮೆರವಣಿಗೆಯಲ್ಲಿ ಅನ್ಯಕೋಮಿನವರ ವಿರುದ್ಧ ಘೋಷಣೆ ಕೂಗಿದವರ ಮೇಲೆ ಕೇಸ್ ದಾಖಲಿಸಲಾಗುವುದು. ಒಂದೇ ಸ್ಥಳದಲ್ಲಿ ಫ್ಲೆಕ್ಸ್ ಬ್ಯಾನರ್ ಬಂಟಿಂಗ್ಸ್ ಅಳವಡಿಸುವ ವಿಚಾರಕ್ಕೆ ಯಾವುದೇ ಪೈಪೋಟಿ ಬೇಡ. ಪೊಲೀಸರ ಸಲಹೆ ಸೂಚನೆಗಳನ್ನು ಯುವಕರು ಪಾಲಿಸಬೇಕು. ಮುಖಂಡರ ನಡುವೆ ಗಲಾಟೆ ನಡೆಯಲ್ಲ, ಯುವಕರ ನಡುವೆ ಗಲಾಟೆ ನಡೆಯುತ್ತದೆ. ಎಂಬುದನ್ನು ಯುವಕರು ಗಮನಿಸಬೇಕು. ಹಿರಿಯರು, ಪೊಲೀಸರ ಸಲಹೆ ಪಾಲಿಸಬೇಕು ಎಂದರು.
ಕಿಡಿಗೇಡಿಗಳು ಇಂತಹ ಸಂದರ್ಭಗಳನ್ನು ಕಾಯುತ್ತಿರುತ್ತಾರೆ. ಗಲಭೆ ಸೃಷ್ಟಿಗೆ ಯತ್ನಿಸುತ್ತಾರೆ. ಹೀಗಾಗಿ ಗಣಪತಿ ಮೆರವಣಿಗೆ ಸಂದರ್ಭದಲ್ಲಿ ಸಂಪೂರ್ಣ ವಿಡಿಯೋ ಗ್ರಾಫಿ ಮಾಡಲಾಗುವುದು. ಅನ್ಯಕೋಮಿನವರ ವಿರುದ್ಧ ಘೋಷಣೆ ಕೂಗಿದಲ್ಲಿ ಕೇಸ್ ದಾಖಲಿಸಲಾಗುವುದು. ಬೇರೆಯವರ ಭಾವನೆಗೆ ಧಕ್ಕೆ ಬರದಂತೆ ಹಬ್ಬವನ್ನು ಎಲ್ಲರೂ ಸೇರಿ ಆಚರಿಸಬೇಕು ಎಂದು ಹೇಳಿದರು.
ಸೆ. 9 ರಂದು ಶುಕ್ರವಾರ ನಡೆಯುವ ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವಕ್ಕೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗುತ್ತಿದ್ದು, ಹೊರ ಜಿಲ್ಲೆಗಳಿಂದಲೂ ಸಿಬ್ಬಂದಿ ಕರೆಸಿಕೊಳ್ಳಲಾಗುವುದು ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ವಿ. ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ರಾಜ್ಯಸಮಿತಿ ವಿಶೇಷ ಆಹ್ವಾನಿತ ಜಿ. ಪದ್ಮನಾಭ್, ರಾಜ್ಯಸಮಿತಿ ನಿರ್ದೇಶಕ ಎನ್. ರವಿಕುಮಾರ್, ನಗರ ಕಾರ್ಯದರ್ಶಿಗಳಾದ ಕೆ.ಆರ್. ಸೋಮನಾಥ್, ಗಾ.ರಾ. ಶ್ರೀನಿವಾಸ್ ಇದ್ದರು.
ವಿಜಯವಾಣಿ ಶಿವಮೊಗ್ಗ ಸ್ಥಾನಿಕ ಸಂಪಾದಕ ಶಾಂತಕುಮಾರ್ ಸ್ವಾಗತಿಸಿದರು. ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಎಸ್. ಹಾಲಸ್ವಾಮಿ ನಿರೂಪಿಸಿದರು. ಜಿಲ್ಲಾ ಖಜಾಂಚಿ ರಂಜಿತ್ ವಂದಿಸಿದರು.
ಶಿವಮೊಗ್ಗ: ಯಾವುದೇ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಬಂದರೆ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಅಭಿಪ್ರಾಯಪಟ್ಟರು.
ನಗರದಲ್ಲಿ ಫ್ಲೆಕ್ಸ್ ಅಳವಡಿಕೆ ವಿಚಾರದಲ್ಲಿ ಪಾಲಿಕೆಯ ನಿಯಮಾವಳಿಗಳಲ್ಲಿ ಕೆಲವು ಗೊಂದಲಗಳಿದ್ದು, ಇದನ್ನು ಸರಿಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.
ಜಿಲ್ಲೆಯಲ್ಲಿ ಗಾಂಜಾ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್.ಪಿ. ಲಕ್ಷ್ಮಿ ಪ್ರಸಾದ್ ಹೇಳಿದರು.