ಶಿವಮೊಗ್ಗ: ತಂತ್ರಜ್ಞಾನ ಮುಂದುವರೆದAತೆ ಹಾಗೂ ಕಾಲ ಬದಲಾದಂತೆ ಪರಿಸರ ನಾಶ ಹೆಚ್ಚಾಗುತ್ತಿದ್ದು, ಇನ್ನೂ ಮುಂದೆ ಜಾಗೃತಿ ವಹಿಸುವ ಜತೆಯಲ್ಲಿ ಪರಿಸರ ನಾಶ ಆಗುವುದನ್ನು ತಡೆಗಟ್ಟಬೇಕಿದೆ ಎಂದು ಜೆಸಿಐ ವಲಯ 24ರ ಅಧ್ಯಕ್ಷ ಶಿವಕುಮಾರ್ ಹೇಳಿದರು.
ಜೆಸಿಐ ಸಪ್ತಾಹದ ಪ್ರಯುಕ್ತ ಶಿವಮೊಗ್ಗ ನಗರದ ವಿವಿಧ ಪ್ರದೇಶಗಳಲ್ಲಿ 20 ಭಾಗಗಳಲ್ಲಿ ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸಿ ಪರಿಸರ ಸಂರಕ್ಷಣೆಯ ನಾಮಫಲಕಗಳನ್ನು ಅನಾವರಣಗೊಳಿಸಿ ಮಾತನಾಡಿ, ತ್ಯಾಜ್ಯ ಹಾಗೂ ವಾಯುಮಾಲಿನ್ಯದಿಂದ ಪರಿಸರಕ್ಕೆ ತುಂಬಾ ಹಾನಿಯಾಗುತ್ತಿದೆ. ತ್ಯಾಜ್ಯ ನಿರ್ವಹಣೆ, ಸಮರ್ಪಕ ವಿಲೇವಾರಿ ಬಗ್ಗೆ ಕ್ರಮ ವಹಿಸಬೇಕಿದೆ ಎಂದು ತಿಳಿಸಿದರು.

ಪರಿಸರ ನಮಗೆ ಒಳ್ಳೆಯ ಗಾಳಿ, ಬೆಳಕು ಹಾಗೂ ಬದುಕಲು ಉತ್ತಮ ವಾತಾವರಣ ಒದಗಿಸುತ್ತಿದೆ. ಆದರೆ ಮನುಷ್ಯರಿಂದ ಪರಿಸರಕ್ಕೆ ಹಾನಿಯೇ ಜಾಸ್ತಿ ಆಗುತ್ತಿದೆ. ಪರಿಸರದ ಸಂರಕ್ಷಣೆ ಮಾಡುವತ್ತ ಎಲ್ಲರೂ ಅಲೋಚನೆ ನಡೆಸಬೇಕು. ಎಲ್ಲರಿಗೂ ಪರಿಸರ ಜಾಗೃತಿ ಮೂಡಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಮಾತನಾಡಿ, ಪರಿಸರ ನಾಶದಿಂದ ವಾತಾವರಣದಲ್ಲಿ ಏರುಪೇರಾಗುತ್ತಿದೆ. ಪರಿಸರ ಸಮತೋಲನ ಕಾಯ್ದುಕೊಳ್ಳಲು ನಾವೆಲ್ಲರೂ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಬೇಕು. ಅವುಗಳನ್ನು ಸಂರಕ್ಷಣೆ ಮಾಡುವ ಕೆಲಸ ಮಾಡಬೇಕು ಎಂದು ಹೇಳಿದರು.
ಪರಿಸರ ಜಾಗೃತಿ, ಸಂರಕ್ಷಣೆಯ ಕಾಯಕದಿಂದ ಮುಂದಿನ ಪೀಳಿಗೆಗೆ ಉತ್ತಮ ಆರೋಗ್ಯಯುತ ವಾತಾವರಣ ನೀಡಲು ಸಾಧ್ಯವಾಗುತ್ತದೆ. ಸಂಘ ಸಂಸ್ಥೆಗಳು ನಿರಂತರವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಆಯೋಜಿಸಬೇಕು ಎಂದು ತಿಳಿಸಿದರು.

ಜೆಸಿಐ ಶಿವಮೊಗ್ಗ ಸಹ್ಯಾದ್ರಿ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಈಗಾಗಲೇ ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರ ಸಹಕಾರದಿಂದ ಪರಿಸರ ಸಂರಕ್ಷಣೆ ಸಾಧ್ಯ ಎಂದು ಹೇಳಿದರು.
ವಲಯ ನಿರ್ದೇಶಕ ಅನೂಶ್‌ಗೌಡ, ಕಾರ್ಯದರ್ಶಿ ಬಿ.ಎನ್.ಸಂತೋಷ್‌ಕುಮಾರ್, ಚಂದ್ರಹಾಸ ಶೆಟ್ಟಿ, ಸಂತೋಷ್ ಹಾಗೂ ಗ್ರಾಮಸ್ಥರು, ಸಾರ್ವಜನಿಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 20 ಕಡೆ ಬಹಳ ಸುಂದರ ಹಾಗೂ ಜನರಿಗೆ ಜಾಗೃತಿ ಮೂಡಿಸಲು ಚಿತ್ರಿಸಿದ ನಾಮಫಲಕ ಬರೆದ ಕಲಾವಿದ ಹಿರೆಕೇರೂರಿನ ಸಂತೋಷ್ ಅವರಿಗೆ ಸನ್ಮಾನಿಸಲಾಯಿತು.

ವರದಿ ಪ್ರಜಾಶಕ್ತಿ…