ಶಿವಮೊಗ್ಗ: ಆಧುನಿಕ ಯುಗದಲ್ಲಿ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸುತ್ತಿದ್ದು, ಉದ್ಯಮ ಕ್ಷೇತ್ರದಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.
ನಗರದ ಮಥುರಾ ಪಾರಾಡೈಸ್ ಪ್ರವಾಸಿ ಕಾರು ನಿಲ್ದಾಣದ ಆವರಣದಲ್ಲಿ ಸ್ವೇದ ಮಹಿಳಾ ಉದ್ಯಮಿಗಳ ಸಂಘ ಪ್ರತಿ ತಿಂಗಳು ಆಯೋಜಿಸುವ ಮಹಿಳಾ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಆರನೇ ಆವೃತ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ಸಂಸಾರದಲ್ಲಿ ಇಬ್ಬರೂ ದುಡಿಯುವ ವಾತಾವರಣ ಇರುವ ಇಂದಿನ ಕಾಲಘಟ್ಟದಲ್ಲಿ ಮಹಿಳಾ ಉದ್ಯಮಿಗಳಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ. ಮಹಿಳೆಯರು ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು.
ಸ್ವೇದ ಸಂಸ್ಥೆಯು ಮಹಿಳಾ ಉದ್ಯಮಿಗಳ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸಿಕೊಡುವ ಇಂತಹ ಕಾರ್ಯಕ್ರಮಕ್ಕೆ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಘ ನಿರಂತರವಾಗಿ ಸಹಕಾರ ನೀಡುತ್ತದೆ. ಸಂಪನ್ಮೂಲ ವ್ಯಕ್ತಿಗಳಿಂದ ಅಗತ್ಯ ಮಾರ್ಗದರ್ಶನ ಒದಗಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ಸರ್ಕಾರ ಮಹಿಳಾ ಉದ್ಯಮಿಗಳಿಗೆ ರೂಪಿಸುವ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ಸಾಲ ಸೌಲಭ್ಯ, ಆರ್ಥಿಕ ನೆರವು, ಉದ್ಯಮ ಆರಂಭಕ್ಕೆ ಸಿಗುವ ಸದಾವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸ್ವೇದ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಲಕ್ಷಿö್ಮÃ ದೇವಿ ಗೋಪಿನಾಥ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ವೊಕಲ್ ಫಾರ್ ಲೋಕಲ್ ಕರೆಯಂತೆ ಶಿವಮೊಗ್ಗದ ಜನತೆ ಶಿವಮೊಗ್ಗದ ಮಹಿಳಾ ಉದ್ಯಮಿಗಳಿಗೆ ಸಂತೆಯಲ್ಲಿ ಭಾಗವಹಿಸುವ ಮೂಲಕ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ನಾಗರಾಜ್, ಸ್ವೇದ ಸಂಸ್ಥೆಯ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್, ಇನ್ನರ್ ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಬಿಂದು ಹಾಗೂ ಮಹಿಳಾ ಉದ್ಯಮಿಗಳು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದರು.