ಶಿವಮೊಗ್ಗ: ಮೈಸೂರು ದಸರಾ ಕುಸ್ತಿ ಸ್ಪರ್ಧೆಯಲ್ಲಿ ಹೊಸನಗರದ ಮೇಘನಾ ಮೊದಲ ಸ್ಥಾನ ಗಳಿಸಿ ಶಿವಮೊಗ್ಗ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ.
ಮಲೆನಾಡಿನ ಯುವತಿ, ಹೊಸನಗರದ ಬಿ.ಮೇಘನಾ ಪ್ರಸ್ತಕ ಸಾಲಿನ ಮೈಸೂರು ದಸರಾದಲ್ಲಿ ಆಯೋಜಿಸಿದ್ದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾರೆ. ದಸರಾ ಸಿಎಂ ಕಪ್ 2022 ಕ್ರೀಡಾಕೂಟದಲ್ಲಿ ಮೇಘನಾ ಮೊದಲ ಬಹುಮಾನ ಗಳಿಸಿದ್ದಾರೆ.
ದಸರಾ ಕುಸ್ತಿಯ 72 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಮೇಘನಾ ಗೆಲುವು ಸಾಧಿಸಿದ್ದು, ಮೊದಲ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. 8 ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಶಿವಮೊಗ್ಗ ಯುವತಿ ಸಾಧನೆಗೆ ಎಲ್ಲ ಗಣ್ಯರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಡಿವಿಎಸ್ ಆಡಳಿತ ಮಂಡಳಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳು ಯುವತಿ ಸಾಧನೆಗೆ ಅಭಿನಂದಿಸಿದ್ದಾರೆ.
ಹೊಸನಗರದ ರಾಮಕೃಷ್ಣ ವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಅಧ್ಯಯನ ಮಾಡಿರುವ ಮೇಘನಾ, ಮೂಡಬಿದರೆಯ ಆಳ್ವಾಸ್ ಕಾಲೇಜ್‌ನಲ್ಲಿ ಪಿಯು ಶಿಕ್ಷಣ ಪೂರೈಸಿದ್ದಾರೆ. ಮೇಘನಾ ಅವರು ಇದೀಗ ಶಿವಮೊಗ್ಗದ ಡಿವಿಎಸ್ ಸಂಸ್ಥೆಯಲ್ಲಿ ಬಿಕಾಂ ಓದುತ್ತಿದ್ದಾರೆ.
ಕಬ್ಬಡ್ಡಿ ಹಾಗೂ ಡಿಸ್ಕಸ್ ಥ್ರೋನಲ್ಲಿ ಸಕ್ರಿಯವಾಗಿ ಭಾಗವಹಿಸಿ ಬಹುಮಾನ ಗೆದ್ದಿರುವ ಮೇಘನಾ ಕುಸ್ತಿಯಲ್ಲಿ ತನ್ನ ಪ್ರತಿಭೆ ಅನಾವರಣಗೊಳಿಸುತ್ತಿದ್ದಾರೆ. ಇವರ ತಂದೆ ಬಾಲಕೃಷ್ಣ ಅವರು ಹೊಸನಗರದಲ್ಲಿ ಆಂಬುಲೆನ್ಸ್ ಚಾಲಕರಾಗಿದ್ದಾರೆ. ಜನಸೇವೆ ಮಾಡುತ್ತಿದ್ದಾರೆ. ತಾಯಿ ಆರೋಗ್ಯ ಶಿಕ್ಷಕಿ ಕರಿಬಸಮ್ಮ ಅವರು ಪುತ್ರಿಯ ಸಾಧನೆಗೆ ಹೆಮ್ಮೆಪಟ್ಟಿದ್ದಾರೆ.