ಶಿವಮೊಗ್ಗ: ರಕ್ತದಾನ ಮಾಡುವುದರಿಂದ ದೇಹ ಮನಸ್ಸು ಸದೃಢವಾಗುವ ಜತೆಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಹ ಕಾರ್ಯದರ್ಶಿ ಜಿ.ವಿಜಯ್‌ಕುಮಾರ್ ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಶಿವಮೊಗ್ಗದ ಸೈಕಲ್ ಲೋಕದಲ್ಲಿ ಸೈಕಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸೈಕಲ್ ಜಾಥಾ ಹಾಗೂ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಆಗುತ್ತದೆ. ಅತ್ಯಂತ ಉತ್ಸಾಹದಿಂದ ಇರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಸೈಕಲ್ ಕ್ಲಬ್‌ನ ಡಾ. ಶೇಖರ್ ಗೌಳೇರ್ ಮಾತನಾಡಿ, ರಕ್ತದಾನ ಮಾಡುವುದರಿಂದ ರಕ್ತದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ. ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ. ಆರೋಗ್ಯವಂತ ವ್ಯಕ್ತಿ ಮೂರು ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಸೈಕಲ್ ಕ್ಲಬ್ ಅಧ್ಯಕ್ಷ ಶ್ರೀಕಾಂತ್ ಮಾತನಾಡಿ, ಪ್ರತಿ ವರ್ಷದ ಎರಡು ಬಾರಿ ನಮ್ಮ ಸಂಸ್ಥೆಯಿಂದ ರಕ್ತದಾನ ಶಿಬಿರ ಆಯೋಜಿಸುತ್ತದೆ. ಸಾರ್ವಜನಿಕರಿಗೆ ರಕ್ತದಾನದ ಅರಿವು ಮೂಡಿಸಲಾಗುತ್ತದೆ ಎಂದು ತಿಳಿಸಿದರು.
ನಗರದ ಶಿವಪ್ಪ ನಾಯಕ ಪ್ರತಿಮೆ ಎದುರು ಭಾಗದಿಂದ ನಗರದಾದ್ಯಂತ ಸೈಕಲ್ ಜಾಥಾ ನಡೆಯಿತು. ಇದೇ ಸಂದರ್ಭದಲ್ಲಿ ಸೈಕಲ್ ಕ್ಲಬ್ ಸದಸ್ಯರು, ವಂದನಾ ಬೇಕರಿ ಸಿಬ್ಬಂದಿ ವರ್ಗ ಸೇರಿ 50ಕ್ಕೂ ಹೆಚ್ಚು ಯೂನಿಟ್ ರಕ್ತದಾನ ಮಾಡಿದರು. ಪ್ರಶಂಸಾ ಪತ್ರ ನೀಡಲಾಯಿತು.
ಜಾಗೃತಿ ಜಾಥಾದಲ್ಲಿ ನಟರಾಜ್, ಶ್ರೀಧರ್, ಹರೀಶ್ ಪಟೇಲ್, ಸುರೇಶ್, ಕಾರ್ಯದರ್ಶಿ ಗಿರೀಶ್ ಕಾಮತ್, ವಂದನಾ ಬೇಕರಿಯ ಮನೋಜ್, ರಜನಿಕಾಂತ್, ಭಾಗ್ಯರಾಜ್ ಮತ್ತಿತರರು ಭಾಗವಹಿಸಿದ್ದರು.