ವಿಕಲಚೇತನ ಮಕ್ಕಳು ದೇವರ ಮಕ್ಕಳು. ಏಕೆಂದರೆ ಅವರಿಗೆ ದೇವರು ವಿಶೇಷವಾದ ಜ್ಞಾನ ಮತ್ತು ಚೈತನ್ಯವನ್ನು ನೀಡಿರುತ್ತಾನೆ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ನುಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಘೂ ಜಿಲ್ಲೆಯಲ್ಲಿ ವಿಕಲಚೇತನರ ಶ್ರೇಯೋಭಿವೃದ್ದಿಗಾಗಿ ಶ್ರಮಿಸುತ್ತಿರುವ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರದ ಸಂತ ಥಾಮಸ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಶೇಷಚೇತನ ಮಕ್ಕಳಲ್ಲಿ ಎಲ್ಲರಿಗಿಂತ ಹೆಚ್ಚಿನ ವಿಚಾರ ಶಕ್ತಿ, ನೆನಪಿನ ಶಕ್ತಿ ಹೀಗೆ ವಿಶೇಷವಾದ ಶಕ್ತಿಯೊಂದು ಇರುತ್ತದೆ. ಅವರು ಅಸಾಮಾನ್ಯರಾಗಿರುತ್ತಾರೆ. ಮತ್ತು ಶ್ರಮಜೀವಿಗಳಾಗಿರುತ್ತಾರೆ. ಶ್ರಮ ಮತ್ತು ಪ್ರಯತ್ನಕ್ಕೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದ ಅವರು ಹೀಗೆ ಯಶಸ್ಸು ಸಾಧಿಸಿದ ವಿಶೇಷಚೇತನರ ನೈಜ ಘಟನೆಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಿ.ಜಿ.ಸುರೇಶ್ ಮಾತನಾಡಿ, ವಿಶೇಷಚೇತನರ ಪ್ರತಿಭೆ ಅನಾವರಣ ಮಾಡಲು ಈ ದಿನಾಚರಣೆ ಒಂದು ಸದಾವಕಾಶವಾಗಿದೆ. ಅವಕಾಶ ದೊರೆತಾಗ ಅದನ್ನು ಬಳಸಿಕೊಂಡು ಯಶಸ್ವಿಯಾಗಬೇಕು. ವಿಶೇಷಚೇತನ ಮಕ್ಕಳನ್ನು ನೋಡುವುದಕ್ಕೆ ಸಂತೋಷವಾಗುತ್ತದೆ. ಶಿಕ್ಷಕರು ಸಹ ಅವರಿಗೆ ಉತ್ತಮವಾದ ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ಶಿಲ್ಪಾ ಎಂ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿ, 21 ವಿವಿಧ ರೀತಿಯ ವಿಕಲಚೇತನರಿಗೆ ವಿವಿಧ ಯೋಜನೆಗಳಡಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 21,694 ವಿಕಲಚೇತನರಿದ್ದು, 16,336 ಯುಡಿಐಡಿ ಕಾರ್ಡ್‍ಗಳನ್ನು ವಿತರಿಸಲಾಗಿದೆ. 2021-22 ನೇ ಸಾಲಿನಲ್ಲಿ ಎಲ್ಲ ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹಧನ ನೀಡಲಾಗಿದೆ. 301 ಫಲಾನುಭವಿಗಳಿಗೆ ಸಾಧನ ಸಲಕರಣೆ ವಿತರಿಸಲಾಗಿದೆ. 12 ಜನರಿಗೆ ಟಾಕಿಂಗ್ ಲ್ಯಾಪ್‍ಟಾಪ್, 226 ಜನರಿಗೆ ಗ್ರಾಮೀಣ ಪುನರ್ವಸತಿ, 42 ಜನರಿಗೆ ಯಂತ್ರಚಾಲಿತ ವಾಹನ, 24 ಜನರಿಗೆ ವಿವಾಹ ಪ್ರೋತ್ಸಾಹ ಧನ ಸೌಲಭ್ಯ ನೀಡಲಾಗಿದೆ. ಜಿಲ್ಲೆಯಲ್ಲಿ 04 ವಿಶೇಷಚೇತನರ ಶಾಲೆಗಳು ಮತ್ತು ಸುರಭಿ ಹಾಸ್ಟೆಲ್ ಕಾರ್ಯನಿರ್ವಹಿಸುತ್ತಿವೆ. ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರ, ವಿಕಲಚೇತನರ ಸಹಾಯವಾಣಿ ಕೇಂದ್ರಗಳು, ಎಂಆರ್‍ಡಬ್ಲ್ಯು, ವಿಆರ್‍ಡಬ್ಲ್ಯುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿಕಲಚೇತನ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು ಹಾಗೂ ವಿಕಲಚೇತನರ ಕ್ಷೇತ್ರದಲ್ಲಿ ಸೇವೆಗೈದ ಪುಷ್ಪಮ್ಮ, ಕೆಂಪಮ್ಮ, ಪ್ರೇಮ, ಮಹಾಂತೇಶರಾವ್ ಮತ್ತು ಹೇಮಾವತಿ ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕಿ ನಂದಿನಿ, ಶಾರದಾ ಅಂಧರ ಕೇಂದ್ರದ ಈಶ್ವರ್ ಭಟ್, ಆಶಾಕಿರಣ ಶಾಲೆಯ ಚಂದ್ರಯ್ಯ, ತರಂಗ ಶಾಲೆಯ ಕೃಷ್ಣಮೂರ್ತಿ, ಸಿದ್ದಾರ್ಥ ಅಂಧರ ಶಾಲೆಯ ಶಿವಬಸಪ್ಪ ಇದ್ದರು.

ವರದಿ ಪ್ರಜಾಶಕ್ತಿ…