ಶಿವಮೊಗ್ಗ: ಭೂಮಿ ಸಂಸ್ಥೆಯಿAದ ತಾಲ್ಲೂಕಿನ ಚಿತ್ರಶೆಟ್ಟಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಾದರಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಶಿವಮೊಗ್ಗ ನಗರದಿಂದ ಕೇವಲ ೨೦ ಕಿ.ಮೀ. ದೂರ ಇರುವ ಈ ಶಾಲೆ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿದ್ದು, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಶಾಲೆಗೆ ವಿದ್ಯುತ್ ಸೇರಿದಂತೆ ಅಗತ್ಯ ಸೌಲಭ್ಯಗಳು ಇದುವರೆಗೂ ತಲುಪಿಲ್ಲ.
ಈ ಹಿನ್ನೆಲೆಯಲ್ಲಿ ಭೂಮಿ ಸಂಸ್ಥೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನ ಸೆಳೆಯುವ ಪ್ರಯತ್ನ ಮಾಡಿತ್ತು. ಅಲ್ಲದೆ, ಮಂಗಳವಾರ ಈ ಶಾಲೆಯಲ್ಲಿ ಮಕ್ಕಳು ಹಾಗೂ ಪೋಷಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸುವ ಮೂಲಕ ಮಾದರಿ ಕನ್ನಡ ರಾಜ್ಯೋತ್ಸವ ಆಚರಿಸಿತು.
ಜೊತೆಗೆ ಮಕ್ಕಳಿಗೆ ಕ್ರೀಡಾಕೂಟ, ಮಕ್ಕಳ ಕಿರು ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಮಕ್ಕಳಿಗೆ ಅಧ್ಯಯನಕ್ಕೆ ಅನುಕೂಲವಾಗುವಂತೆ ಮಹನೀಯರ ಆತ್ಮಚರಿತ್ರೆಯ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಹಲವಾರು ವರ್ಷಗಳಿಂದ ಬಣ್ಣ ಕಾಣದ ಶಾಲೆಗೆ ಬಣ್ಣ ಪೂರೈಸಲಾಯಿತು.
ಭೂಮಿ ಸಂಸ್ಥೆಯು ಕಳೆದ ೭ ವರ್ಷಗಳಿಂದ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳ ಅಭಿವೃದ್ಧಿ, ಶಾಲೆಗಳಲ್ಲಿ ಗ್ರಂಥಾಲಯಗಳ ಸ್ಥಾಪನೆ, ಕೆರೆ ಕೊಳಗಳ ಅಭಿವೃದ್ಧಿ, ಉಚಿತ ಅರೋಗ್ಯ ತಪಾಸಣಾ ಶಿಬಿರದಂತಹ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ, ಪ್ರಮುಖರಾದ ನಿತಿನ್ ತಲಾರಿ, ಸಂಗೀತ್ ಕುಮಾರ್, ಗಾರ್ವಿನ್, ಅಭಿ, ರಾಕೇಶ್, ಕುಬೇಂದ್ರಸ್ವಾಮಿ, ಶಾಲೆಯ ಶಿಕ್ಷಕರು, ಪೋಷಕರು, ಎಸ್‌ಡಿಎಂಸಿ ಅಧ್ಯಕ್ಷ ಪುರುಷೋತ್ತಮ್, ಶಿಕ್ಷಕರಾದ ರಜನಿ, ನರೇಶ್, ಮಕ್ಕಳು ಇದ್ದರು.