ಶಿವಮೊಗ್ಗ : ಅಡುಗೆ ಕಾರ್ಮಿಕರು ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಬಿಜೆಪಿ ಮುಖಂಡರು ಹಾಗೂ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಸಲಹೆ ನೀಡಿದರು.
ಸರ್ಜಿ ಫೌಂಡೇಶನ್ , ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತಾಲ್ಲೂಕು ಅಡಿಗೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಗುಂಡಪ್ಪ ಶೆಡ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಬರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ಅಡಿಗೆ ಕಾರ್ಮಿಕರಿಗೆ ಉಚಿತ ಆರೋಗ್ಯ ಕಾರ್ಡ್ ವಿತರಣೆ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹಗಲು-ರಾತ್ರಿಯೆನ್ನದೇ ಕೆಲಸ ಮಾಡುವ ಅಡುಗೆ ಕಾರ್ಮಿಕರಿಗೆ ದೈಹಿಕ ಹಾಗೂ ಮಾನಸಿಕ ಒತ್ತಡ ಇದ್ದೇ ಇರುತ್ತದೆ. ಹಾಗಾಗಿ ಆರೋಗ್ಯದ ಕುರಿತು ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಅಡುಗೆ ಕಾರ್ಮಿಕರು ಕೌಟುಂಬಿಕ, ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಿಂದಲೂ ದೂರ ಉಳಿಯುವಂತಹ ಸಂದರ್ಭಗಳೇ ಹೆಚ್ಚು. ಹಾಗಾಗಿ ವೃತ್ತಿ ಬದುಕಿನೊಂದಿಗೆ ಎಲ್ಲವನ್ನೂ ಸಮತೋಲಿತವಾಗಿ ತೆಗೆದುಕೊಂಡು ಹೋದಾಗ ಮಾತ್ರ ನೆಮ್ಮದಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಿತ್ಯವೂ ನಿಂತುಕೊಂಡೇ ಕೆಲಸ ಮಾಡಿದಾಗ ವೆರಿಕೋಸ್ ವೇಯಿನ್‌ನಂತಹ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಮ್ಮ ಸರ್ಜಿ ಆಸ್ಪತ್ರೆಯಿಂದ ಮುಂದಿನ ದಿನಗಳಲ್ಲಿ ಸಂಘದ ಸದಸ್ಯರಿಗೆ ಉಚಿತವಾಗಿ ಟಿಟಿ ಇಂಜೆಂಕ್ಷನ್ ನೀಡಲಾಗುವುದು, ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಇದೇ ಸಂದರ್ಭ ತಾಲೂಕು ಅಡಿಗೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೆ ಸರ್ಜಿ ಆಸ್ಪತ್ರೆಯ ಉಚಿತ ಹೆಲ್‌್ತ ಕಾರ್ಡ್ ವಿತರಿಸಲಾಯಿತು. ಅಲ್ಲದೇ 150 ಕ್ಕೂ ಹೆಚ್ಚು ಅಡುಗೆ ಕಾರ್ಮಿಕರಿಗೆ ಮಧುಮೇಹ, ರಕ್ತದೊತ್ತಡ ಮತ್ತು ಸ್ತ್ರೀ ರೋಗ, ಮುಳೆ ರೋಗಕ್ಕೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸಿ ಉಚಿತ ಔಷಧಿ ವಿತರಿಸಲಾಯಿತು.
ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಜನರಲ್ ಪಿಜಿಷಿಯನ್ ಶೂನ್ಯ ಸಂಪದ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರಾದ ಡಾ.ಶಾಂತಲಾ, ಮಕ್ಕಳ ತಜ್ಞರಾದ ಡಾ.ಸುಭಾಷ್, ಮೂಳೆರೋಗ ತಜ್ಞರಾದ ಡಾ. ನಿಖಿಲ್ ಹಾಗೂ ಆರೋಗ್ಯ ಸಿಬ್ಬಂದಿ ಭಾಗವಹಿಸಿದ್ದರು. ತಾಲೂಕು ಅಡಿಗೆ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ಪ್ರಭಾಕರ್, ಅಧ್ಯಕ್ಷರಾದ ಮಂಜುನಾಥ್, ಉಪಾಧ್ಯಕ್ಷರಾದ ಚಂದ್ರಶೇಖರ್ ಹಾಜರಿದ್ದರು.