ಸಿದ್ಧಾಂತವನ್ನು ಬಿಟ್ಟುಕೊಡದ ಕಾರಣ ಮತ್ತು ಪುಸ್ತಕಗಳನ್ನು ಮಾರ್ಕೆಟಿಂಗ್ ಮಾಡದ ಕಾರಣ ನನ್ನ ಸಾಹಿತ್ಯ ಕೃತಿಗಳು ಹೆಚ್ಚು ಪ್ರಚಾರಕ್ಕೆ ಬರಲಿಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಲಕ್ಷ್ಮಣ್ ಕೊಡಸೆ ಹೇಳಿದರು.


ಅವರು ಗೋಪಾಲಗೌಡ ಬಡಾವಣೆಯ ಬಾಲಾಜಿ ಎನ್‌ಕ್ಲೇವ್‌ನಲ್ಲಿ ಈಡಿಗರ ಸಂಘ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ೫೨ ಕೃತಿಗಳನ್ನು ರಚಿಸಿರುವ ನನ್ನನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗುರುತಿಸಿರುವುದಕ್ಕೆ ಕೃತಜ್ಞನಾಗಿರುವೆ. ರಾಜ್ಯದ ವಿವಿಧ ಅಕಾಡೆಮಿಗಳು ಇನ್ನು ಪ್ರಮುಖವಾಗಿ ಗುರುತಿಸಿಲ್ಲ ಎಂಬುದು ನಮ್ಮ ರಾಜ್ಯದ ಹಲವು ಸ್ನೇಹಿತರ ಅಭಿಪ್ರಾಯವಾಗಿದೆ.ನಾನೆಂದು ಪತ್ರಿಕೆಯಲ್ಲಿ ಇದ್ದರೂ ಸಹ ಪ್ರಚಾರ ಮಾಡಿಲ್ಲ ಎಂದು ಹೇಳಿದರು.
ಸಮುದಾಯದ ಪಾಲಕರು ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು. ಪ್ರತಿಭೆಗಳು ಅರಳಲು ಸಮುದಯದ ಸಂಘಟನೆಗಳು ವೇದಿಕೆ ಸಜ್ಜುಗೊಳಿಸಬೇಕು. ಓದುವ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸಬೇಕು. ನಿವೃತ್ತಿಯ ನಂತರ ನನ್ನ ಬರವಣಿಗೆ ಹೆಚ್ಚಾಗಿದೆ ಎಂದು ಹೇಳಿದರು.

ಸೈಬರ್ ಕಾಪ್ ಆಫ್ ಇಂಡಿಯಾ ಪ್ರಶಸ್ತಿಗೆ ಭಾಜನರಾಗಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ಮಾತನಾಡಿ, ಇಂದು ಸೈಬರ್ ಜಾಲದಲ್ಲಿನ ವಂಚನೆ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಬೇಕು. ಮಕ್ಕಳ ಮಾನಸಿಕ ಆರೋಗ್ಯ ಹಾಳುಮಾಡುವ ಮೊಬೈಲ್ ಅನ್ನು ಒಳ್ಳೆಯದಕ್ಕೆ ಮಾತ್ರ ಬಳಸಬೇಕು. ಇಂದು ವಿದ್ಯಾವಂತರೇ ಹೆಚ್ಚಾಗಿ ಮೋಸಕ್ಕೆ ಒಳಗಾಗುತ್ತಿದ್ದಾರೆ. ಸಮಾಜ ಪರಿವರ್ತನೆ ಆಗುವುದೆಂದರೆ ಎಲ್ಲಾ ಬಗೆಯ ಮೋಸದಿಂದ ಕಳಚಿಕೊಳ್ಳುವುದಾಗಿದೆ ಎಂದು ಹೇಳಿದರು.
ಡಾ.ಅಣ್ಣಪ್ಪ ಮಳೀಮಠ್ ಅವರು ಕೊಡಸೆಯವರ ಕುರಿತು ಅಭಿನಂದನಾ ಮಾತನಾಡಿದರು. ಡಾ.ನಾಗೇಶ್ ಬಿದರಗೋಡು ಗುರುರಾಜ್ ಅವರನ್ನು ಅಭಿನಂದಿಸಿ ಮಾತನಾಡಿದರು. ಈಡಿಗರ ಸಂಘದ ಅಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಹಿರಿಯರಾದ ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಈಡಿಗ ಸಂಘದ ಕಾರ್ಯದರ್ಶಿ ಎಸ್.ಸಿ.ರಾಮಚಂದ್ರ ಉಪಸ್ಥಿತರಿದ್ದರು. ನಿರ್ದೇಶಕ ಕುಬಟಳ್ಳಿ ರಾಮಚಂದ್ರ ಸ್ವಾಗತಿಸಿದರು. ಪತ್ರಕರ್ತ ನಾಗರಾಜ್ ನೇರಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಡಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಸಿ.ರಾಮಚಂದ್ರ ವಂದಿಸಿದರು.

ವರದಿ ಪ್ರಜಾ ಶಕ್ತಿ…