ಶಿವಮೊಗ್ಗ: ನಾವು ನಿತ್ಯ ಮಾಡುವ ವೃತ್ತಿಯ ಜತೆಯಲ್ಲಿ ಸಮಾಜಸೇವೆಯು ಮುಖ್ಯ. ನಾವು ಮಾಡುತ್ತಿರುವ ವೃತ್ತಿಯಲ್ಲಿ ಸಮಾಜಕ್ಕೆ ಸಾರ್ಥಕ ಸೇವೆ ಸಲ್ಲಿಸುವುದರಿಂದ ಆತ್ಮಸಂತೋಷ ಹಾಗೂ ತೃಪ್ತಿ ಸಿಗುತ್ತದೆ ಎಂದು ರೋಟರಿ ವಲಯ ಸಹಾಯಕ ಗವರ್ನರ್ ಡಾ. ಗುಡದಪ್ಪ ಕಸಬಿ ಹೇಳಿದರು.

ರಾಜೇಂದ್ರ ನಗರದ ರೋಟರಿ ಸಭಾಂಗಣದಲ್ಲಿ ಸಮಾಜದಲ್ಲಿ ಸಾರ್ಥಕ ಸೇವೆ ಸಲ್ಲಿಸಿದ ಗಣ್ಯರಿಗೆ ವೃತ್ತಿ ಸೇವಾ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಉತ್ತಮ ಸೇವೆ ಮಾಡುವವರನ್ನು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದಾಗ ಸಂಸ್ಥೆಯು ಗೌರವವು ಹೆಚ್ಚುತ್ತದೆ ಎಂದು ತಿಳಿಸಿದರು.

ಸನ್ಮಾನಿತರಿಗೆ ಸೇವೆ ಮಾಡಲು ಉತ್ಸಾಹ ಹೆಚ್ಚುವ ಜತೆಯಲ್ಲಿ, ಸಮಾಜದ ಇತರರಿಗೂ ಸೇವಾ ಮನೋಭಾವ ಹಾಗೂ ಸೇವೆ ಚಟುವಟಿಕೆಗಳನ್ನು ಆಯೋಜಿಸುವುದಕ್ಕೆ ಪ್ರೇರಣೆ ಸಿಗುತ್ತದೆ. ಸಮಾಜದ ಒಳಿತಿಗಾಗಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರ ಸೇವೆಯು ಶ್ಲಾಘನೀಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಕುಮಾರಸ್ವಾಮಿ ಮಾತನಾಡಿ, ಈಗಾಗಲೇ ನಮ್ಮ ರೋಟರಿ ಸಂಸ್ಥೆ ವತಿಯಿಂದ ವೃತ್ತಿ ಸೇವಾ ಮಾಸಾಚರಣೆ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ವೃತ್ತಿ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ನೌಕರ ಗೋಪಿನಾಥ್ ಅವರಿಗೆ ಆಸ್ಪತ್ರೆಯಲ್ಲಿ ಸಲ್ಲಿಸಿದ ವಿಶೇಷ ಸೇವೆಯನ್ನು ಪರಿಗಣಿಸಿ ವೃತ್ತಿ ಸೇವಾ ಪ್ರಶಸ್ತಿ ನೀಡಲಾಯಿತು. ಮಾಜಿ ಸಹಾಯಕ ಗವರ್ನರ್ ಜಿ.ವಿಜಯ್‌ಕುಮಾರ್, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕುಮಾರಸ್ವಾಮಿ, ವಲಯ ಸೇನಾನಿ ರವಿ ಕೋಟೋಜಿ ಹಾಗೂ ರೋಟರಿ ಶಿವಮೊಗ್ಗ ಪೂರ್ವ, ಇನ್ನರ್‌ವ್ಹೀಲ್ ಸದಸ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…