ಕನ್ನಡ ಸಾಹಿತ್ಯ ಪರಿಷತ್ತು ಹಳ್ಳಿಗೆ ಬಂದು ಇಲ್ಲಿರುವ ಮಕ್ಕಳು, ದೊಡ್ಡವರ ಪ್ರತಿಭೆ ಗುರುತಿಸಿ ಅವರಿಗೊಂದು ಅವಕಾಶ ನೀಡುವುದರ ಜೊತೆಯಲ್ಲಿ ದತ್ತಿ ಉಪನ್ಯಾಸ ಏರ್ಪಡಿಸಿ ಸಾಹಿತ್ಯದ ನುಡಿಹಬ್ಬ ಏರ್ಪಡಿಸಿ ಹಳ್ಳಿಗರಿಗೂ ಉತ್ತಮ ಅವಕಾಶ ನೀಡುವುದನ್ನು ಒಳ್ಳೆಯ ಬೆಳವಣಿಗೆ ಎಂದು ಶ್ರೀ ಬೆಕ್ಕಿನಕಲ್ಮಠದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ನುಡಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಫೆಬ್ರವರಿ ೨೮ ರಂದು ಸಂಜೆ ಯಲವಟ್ಟಿ ಗ್ರಾಮದ ಶ್ರೀ ಪಾರ್ವತಿ ಪರಮೇಶ್ವರ ದೇವಸ್ಥಾನ ಸಮಿತಿಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಾಹಿತ್ಯ ಸಂಜೆ ಮತ್ತು ದತ್ತಿನಿಧಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಶಾಲಾ ಕಲಿಕೆಹಂತದಲ್ಲಿ ಇಂಗ್ಲೀಷ್ ವ್ಯಾಮೋಹ ಎದ್ದುಕಾಣುತ್ತಿದೆ. ಪೋಷಕರೇ ಆ ವ್ಯಾಮೋಹದಲ್ಲಿ ಸಿಲುಕಿದ್ದಾರೆ. ಇಂಗ್ಲೀಷ್, ಟಿ.ವಿ, ಮೊಬೈಲ್ ಸಾಂಕ್ರಾಮಿಕ ರೋಗವಾಗಿ ಕಾಡುತ್ತಿದೆ. ಹತ್ತನೇ ತರಗತಿ ಪಾಸ್ ಆಗಿದ್ದರೂ ಕನ್ನಡ ಓದಲು, ಮಾತನಾಡಲು ಬಾರದಿರುವ ವ್ಯವಸ್ಥೆ ನೋಡಿಯೂ ನಮಗೆ ಬುದ್ಧಿಬಂದಿಲ್ಲ ಎಂದು ಹಿತನುಡಿದರು.
ಶ್ರೀ ಬೆಕ್ಕಿನಕಲ್ಮಠದ ಮಲೆನಾಡು ವೀರಶೈವ ಅಧ್ಯಯನ ಸಂಸ್ಥೆಯು ಶ್ರೀ ಆನಂದಪುರಂ ಜಗದ್ಗುರು ಶ್ರೀ ಗುರುಬಸವ ಮಹಾಸ್ವಾಮಿಗಳ ಹೆಸರಲ್ಲಿ ನೀಡಿರುವ ದತ್ತಿಯ ಆಶಯದಂತೆ ಕೆಳದಿ ಸಂಸ್ಥಾನದ ಧರ್ಮ ಸಮನ್ವಯ ವಿಚಾರವಾಗಿ ಇತಿಹಾಸ ಉಪನ್ಯಾಸಕರು, ಸಂಶೋಧಕರಾದ ಡಾ. ಕೆ. ಜಿ. ವೆಂಕಟೇಶ ಮಾತನಾಡಿದರು.
ಸಾಹಿತಿಗಳು, ವಿಶ್ರಾಂತ ಕಾರ್ಯದರ್ಶಿಗಳು ಆಗಿರುವ ಡಾ. ಶರಶ್ಚಂದ್ರ ರಾನಡೆ ಅವರು ಡಾ. ದ. ರಾ. ಬೇಂದ್ರೆ ಅವರ ಹೆಸರಲ್ಲಿ ನೀಡಿದ ದತ್ತಿಯ ಆಶಯದಂತೆ ಬೇಂದ್ರೆ ಸಾಹಿತ್ಯ ಚಿಂತನೆ ವಿಚಾರವಾಗಿ ಸಾಹಿತಿಗಳು, ಪ್ರಿನ್ಸಿಪಾಲ್ ಆಗಿರುವ ಡಾ. ಬಿದರಗೋಡು ನಾಗೇಶ್ ಅವರು ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಉಮಾಶಂಕರ್, ಕಸಾಪ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಮಹಾದೇವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯದರ್ಶಿ ಹೂವಪ್ಪ, ಕೋಶಾಧ್ಯಕ್ಷರಾದ ಪ್ರದೀಪ್, ಸಂಚಾಲಕರಾದ ಸೋಮಿನಕಟ್ಟಿ ವೇದಿಕೆಯಲ್ಲಿದ್ದರು.
ಕು. ಶಾರ್ವನಿ ಪ್ರಾರ್ಥನೆ ಹಾಡಿದರು. ಗ್ರಾಮಸ್ಥರಾದ ಧನಂಜಯ ಸ್ವಾಗತಿಸಿದರು. ಗ್ರಾಮದ ಲೋಕೇಶ್ವರಪ್ಪ, ಪುಲ್ ಕೇಶ, ತೇಜಸ್ ವಿವಿಧ ಕಾರ್ಯಗಳನ್ನು ನಿರ್ವಹಿಸಿದರು.