ದಾವಣಗೆರೆ : ಟಿ ಆರ್ ಡಿ ಎಫ್ ಕಾರ್ಯದರ್ಶಿಗಳ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಬಹು ನಿರೀಕ್ಷಿತ ಯೋಜನೆಯಾದ ಪಿಎಂಜೆ ವೈನ ಎನೇಬಲ್ ಹೆಲ್ತ್ ಆಂಡ್ ವೆಲ್ನೆಸ್ ಸೆಂಟರ್ ಅನ್ನು ಜಗಳೂರು ತಾಲೂಕಿನ ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ.
ಸಿರಿಗೆರೆಯ ಪರಮಪೂಜ್ಯ ತರಳಬಾಳು ಜಗದ್ಗುರು ಡಾ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಕೇಂದ್ರವನ್ನು ಸ್ಥಾಪಿಸಲು ಒಡಬಂಡಿಕೆ ಮಾಡಿಕೊಳ್ಳಲಾಗಿದೆ.
ಕೇಂದ್ರ ಸರಕಾರ 2017 ರಲ್ಲಿ ದೇಶದ ಎಲ್ಲೆಡೆ 1.50 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಯೋಗಿಕವಾಗಿ ಜಗಳೂರು ತಾಲೂಕು ಪಲ್ಲಾಗಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಬೆಂಗಳೂರಿನ ಟೆಸ್ಲಾನ್ ಟೆಕ್ನಾಲಜೀಸ್ ರೂಪಿಸಿರುವ ತಂತ್ರಜ್ಞಾವನ್ನು ಬಳಸಿಕೊಂಡು ಕೇಂದ್ರ ಸ್ಥಾಪನೆಗೊಳ್ಳಲಿದೆ. ಶಿವಮೊಗ್ಗ ಸರ್ಜಿ ಆಸ್ಪತ್ರೆಗಳ ಸಮೂಹ, ಸಿರಿಗೆರೆ ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ ಆರೋಗ್ಯ ಇಲಾಖೆ, ಬೆಂಗಳೂರು ಟೆಸ್ಲಾನ್ ಟೆಕ್ನಾಲಜೀಸ್ ಅವರುಗಳನ್ನೊಳಗೊಂಡು ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಈ ಮಹತ್ವದ ಯೋಜನೆಗೆ ಸರ್ಜಿ ಆಸ್ಪತ್ರೆಯು ಅಗತ್ಯ ತಜ್ಞ ವೈದ್ಯರ ಸೇವೆಯನ್ನು ಒದಗಿಸುವ ಮೂಲಕ ಪ್ರಧಾನ ಮಂತ್ರಿಗಳ ಕನಸಿನ ಕೂಸಾದ ಉನ್ನತ ಮಟ್ಟದ ವೈದ್ಯಕೀಯ ಸೇವೆಯನ್ನು ಪ್ರತಿ ಹಳ್ಳಿಗಳಿಗೆ ತಲುಪಿಸಲು ಡಾ. ಧನಂಜಯ ಸರ್ಜಿಯವರು ಪ್ರಥಮ ಹೆಜ್ಜೆ ಇಟ್ಟಂತಾಗಿದೆ. ಟೆಸ್ಲಾನ್ ಟೆಕ್ನಾಲಜೀಸ್ ಸಂಸ್ಥೆಯು ತಾಂತ್ರಿಕತೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಯೋಜನೆ ಅನುಷ್ಠಾನಕ್ಕೆ ಮುಂದಾಗಲಿದೆ. ಈ ಒಂದು ಒಡಂಬಡಿಕೆಗೆ ಸಹಿ ಮಾಡುವ ಮೂಲಕ ಅತ್ಯಾಧುನಿಕ ವೈದ್ಯಕೀಯ ಸೇವೆಯನ್ನು ದೇಶಕ್ಕೆ ಮಾದರಿಯಾಗಿಸುವ ನಿಟ್ಟಿನಲ್ಲಿ ಸಂಕಲ್ಪ ಮಾಡಿದಂತಾಗಿದೆ. ಎಲ್ಲೆಡೆ ಆರೋಗ್ಯ ಮತ್ತು ಎಲ್ಲರಿಗೂ ಆರೋಗ್ಯ ಘೋಷ ವಾಕ್ಯದಡಿ ಸೇವೆ ದೊರೆಯಲಿದೆ.
ಪಲ್ಲಾಗಟ್ಟೆಯ ಬೆಸ್ಕಾಂ ನಿವೃತ್ತ ಅಧೀಕ್ಷಕ ಎಂಜಿನಿಯರ್ ವೈ.ಕೆ.ಬಸವರಾಜಪ್ಪ ಮತ್ತು ಕುಟುಂಬದವರು ಈ ಯೋಜನೆಗೆ ಆರ್ಥಿಕ ನೆರವು ನೀಡಿದ್ದಾರೆ. ಈ ಸಂದರ್ಭ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಡಾ.ಕೆ.ಬಸವರಾಜ್, ಜಿಲ್ಲಾ ವೈದ್ಯಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಕ್ಷಯ ರೋಗ ವಿಶೇಷಾಧಿಕಾರಿ ಡಾ.ಗಂಗಾಧರ, ಶಿವಮೊಗ್ಗ ಸರ್ಜಿ ಆಸ್ಪತ್ರೆಗಳ ಸಮೂಹದ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಧನಂಜಯ ಸರ್ಜಿ, ಸೂರ್ಯ ಶಂಕರ್, ಹರ್ಷ ಮರೂರ್ ಹಾಗೂ ಬೆಂಗಳೂರಿನ ಒಪೆಲ್ ಕಂಪನಿಯ ರಾಘವೇಂದ್ರ ಮತ್ತಿತರರು ಹಾಜರಿದ್ದರು.
ಅಸ್ತಿತ್ವದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಹಾಗೂ ದಾನಿಗಳ ಸಹಾಯದಿಂದ ತಂತ್ರಜ್ಞಾನ ಸಕ್ರಿಯಗೊಳಿಸಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸ್ಥಳೀಯ ಮತ್ತು ದೂರದ ವೈದ್ಯರ ಸೇವೆಯನ್ನು ಬಳಸಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಶಿವಮೊಗ್ಗ ಸರ್ಜಿ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಧನಂಜಯ ಸರ್ಜಿ ಅವರು ತಮ್ಮ ಆಸ್ಪತ್ರೆಗಳಿಂದ ಪರಿಣಿತ ವೈದ್ಯರ ಸೇವೆ ಒದಗಿಸಲಿದ್ದು, ಇದು ಯೋಜನೆಗೆ ಮತ್ತಷ್ಟು ಬಲ ತಂದಿದೆ. ಅಲ್ಲದೇ ಅವರ ಮಾನವೀಯ ಕಾಳಜಿಗೆ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ಡಾ.ಕೆ.ಬಸವರಾಜ್, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಉಪಸ್ಥಿತರಿದ್ದರು.