ಹಲವು ತಲ್ಲಣಗಳ ಜೊತೆ ಬದುಕುತ್ತಿರುವ ಯುವ ಸಮುದಾಯ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸುವ ಮೊದಲು ತಮ್ಮನ್ನು ಬದಲಾಯಿಸಿಕೊಳ್ಳಬೇಕು ಎಂದು ಖ್ಯಾತ ಲೇಖಕ ಹಾಗೂ ಬೆಂಗಳೂರು ವಿವಿಯ ಕನ್ನಡ ಪ್ರಾಧ್ಯಾಪಕ ಡಾ. ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ಹಾಗೂ ಹೊಂಗಿರಣ, ಶಿವಮೊಗ್ಗ ಸಹಯೋಗದಲ್ಲಿ ‘ಹೊಸ ತಲೆಮಾರಿಗೆ ಲಂಕೇಶ್’ ಸಾಹಿತ್ಯಾನುಸಂಧಾನ’ ಕುರಿತ ಒಂದು ದಿನದ ಕಮ್ಮಟ ಉದ್ಘಾಟಿಸಿ ಮಾತನಾಡಿದರು.
ಎಲ್ಲವನ್ನು ವಿರೋಧಿಸಲು ಅಥವಾ ಎಲ್ಲವನ್ನು ಒಪ್ಪುವ ದಾರಿಯನ್ನು ಹಿಡಿಯದೇ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅರ್ಥ ಮಾಡಿಕೊಳ್ಳುವ ವಿವೇಕವನ್ನು ಬೆಳೆಸಿಕೊಳ್ಳಬೇಕು. ಆಗ ವ್ಯಕ್ತಿಯಿಂದ ಆರಂಭವಾಗುವ ಪ್ರಗತಿ ಸಮಾಜಮುಖಿಯಾಗಿ ಚಲಿಸಲು ಸಾಧ್ಯ. ಲಂಕೇಶರ ತಮ್ಮ ಸಾಹಿತ್ಯದ ಮೂಲಕ ಕನ್ನಡ ಜಾಣಜಾಣೆಯರಿಗೆ ಕಲಿಸಲು ಪ್ರಯತ್ನಿಸಿದ್ದು ಇದೇ ವಿವೇಕವನ್ನು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಮಾತನಾಡಿ, ಸಮಕಾಲೀನ ಸಂದರ್ಭದ ಹಲವು ಸಮಸ್ಯೆಗಳಿಗೆ ಲಂಕೇಶ್ ಸಾಹಿತ್ಯವು ಪರಿಹಾರ ಸೂಚಿಸುತ್ತದೆ ಎಂದರಲ್ಲದೆ ನಾವೆಲ್ಲ ಇಂದು ಲಂಕೇಶ್ ಸಾಹಿತ್ಯಾಧ್ಯಯನದತ್ತ ಮುಖಮಾಡಬೇಕಿದೆ ಎಂದರು.
ಕನ್ನಡ ಭಾರತಿಯ ಪ್ರಾಧ್ಯಾಪಕ ಪ್ರೊ. ಜಿ ಪ್ರಶಾಂತ ನಾಯಕ್ ಮಾತನಾಡಿ, ಯುವಜನತೆ ಅರ್ಥಹೀನ ಇಸಮ್ ಗಳಿಂದ ಹೊರಬಂದು ಜಗತ್ತನ್ನು ಮುಕ್ತವಾಗಿ ನೋಡಲು ಲಂಕೇಶರ ಸಾಹಿತ್ಯ ನಮಗೆ ರಹದಾರಿ ಎಂದರು. ಶಿಬಿರದ ಸಂಚಾಲಕ ಡಾ. ಸಾಸ್ವೆಹಳ್ಳಿ ಸತೀಶ್, ಅಂಕಣಕಾರ ಚಂದ್ರೇಗೌಡ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ವಿಭಾಗಗಳ ಅಧ್ಯಾಪಕರು ಪಾಲ್ಗೊಂಡಿದ್ದರು.