ಬಂಟರು ಯಾನೆ ನಾಡವರು ತಮ್ಮದೇ ಆದ ವಿಶೇಷ ಪರಂಪರೆಯನ್ನು ಹೊಂದಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ವಾಸಿಸುತಿದ್ದಾರೆ. ಈಗ ಜಗತ್ತಿನಾದ್ಯಂತ ವ್ಯಾಪಿಸಿದ್ದಾರೆ. ಆದರೆ ಸರಕಾರ ಬಜೆಟ್‌ನಲ್ಲಿ ಆಗಲಿ, ಇನ್ನಿತರ ರೂಪದಲ್ಲಿ ಆಗಲಿ ಈ ಸಮುದಾಯ ಕ್ಕೆ ಯಾವುದೇ ರೀತಿಯ ಸಹಾಯ ಮಾಡಿಲ್ಲ.

ಆದ್ದರಿಂದ ಇನ್ನಾದರೂ ಬಂಟರ ಯಾನೆ ನಾಡವರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಶ್ರೀಬಾರಕೂರು ಮಹಾಸಂಸ್ಥಾನದ ವಿಶ್ವಸ್ಥ ಮಂಡಳಿಯ ಗುರುಗಳಾದ ಶ್ರೀವಿಶ್ವ ಸಂತೋಷ ಭಾರತಿ ಗುರೂಜಿ ಆಗ್ರಹಿಸಿದ್ದಾರೆ.

ಬಾರಕೂರಿನ ತಮ್ಮ ಸಂಸ್ಥಾನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಇತ್ತೀಚೆಗೆ ಪ್ರತಿಯೊಂದು ಜಾತಿ ಮತ್ತು ಸಮುದಾಯಕ್ಕೆ ಅಭಿವೃದ್ಧಿ ನಿಗಮವನ್ನು ಘೋಷಿಸುತ್ತಿದೆ. ಕೆಲವರು ಹೋರಾಟದ ಮೂಲಕವೂ ಪಡೆದುಕೊಂಡಿದ್ದಾರೆ. ರಾಜ್ಯದ ಪ್ರತಿಯೊಂದು ಸಮಾಜವೂ ಅಭಿವೃದ್ಧಿಯ ಚಿಂತನೆ ನಡೆಸುತ್ತಿರುವಂತೆ, ಇದೀಗ ಬಂಟರು ಯಾನೆ ನಾಡವರೂ ಸಹ ತಮ್ಮ ಸಮಾಜಕ್ಕೊಂದು ಅಭಿವೃದ್ಧಿ ನಿಗಮವನ್ನು ಬಯಸಿದರೆ ತಪ್ಪಿಲ್ಲ ಎಂದು ಸ್ವಾಮೀಜಿ ತಿಳಿಸಿದರು.

2ಎಗೆ ಸೇರಿಸಿ…

ನಮ್ಮ ಸಮಾಜದ ನಾಡವರನ್ನು 2ಎ ಗುಂಪಿನಲ್ಲೂ, ಬಂಟರನ್ನು ೩ಎ ಗುಂಪಿನಲ್ಲೂ, ನಾಡವ ಒಕ್ಕಲಿಗರನ್ನು ೩ಎ ಗುಂಪಿನಲ್ಲೂ ಅಸಂಬದ್ಧವಾಗಿ ವರ್ಗೀಕರಿಸಲಾಗಿದೆ. ಈ ಎಲ್ಲರನ್ನೂ ಸಮೀಕರಿಸಿದ ಇಡೀ ಸಮಾಜವನ್ನು ಮೀಸಲಾತಿಯಲ್ಲಿ ೨ಎ ಗುಂಪಿಗೆ ಸೇರಿಸಬೇಕೆಂಬುದು ಸಮಾಜ ದ ಪ್ರಮುಖ ಬೇಡಿಕೆಯಾಗಿದೆ ಎಂದು ಶ್ರೀಸಂತೋಷ ಗುರೂಜಿ ಹೇಳಿದರು.

ನಮ್ಮನ್ನು 2ಎ ಗ್ರೂಫ್‌ಗೆ ಸೇರಿಸಿ ಮೀಸಲಾತಿ ನೀಡಬೇಕೆಂದು ನಾವೇನೂ ಹೋರಾಟ ಮಾಡುವುದಿಲ್ಲ. ಸರಕಾರದ ಮೇಲೆ ಒತ್ತಡ ತರುವುದಿಲ್ಲ. ಆದರೆ ಎಲ್ಲರನ್ನೂ 2ಎ ಒಂದೇ ಗುಂಪಿಗೆ ಸೇರಿಸಿ ಎಂದು ನಾವು ಒತ್ತಾಯಿಸುತ್ತೇವೆ ಎಂದರು.

ವರದಿ ಪ್ರಜಾ ಶಕ್ತಿ…