ಶಿವಮೊಗ್ಗ: ಶಾಸಕರಾಗಿ ಕಳೆದ ಐದು ವರ್ಷದಲ್ಲಿ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಹಾಗೂ ಮಾದರಿ ಕ್ಷೇತ್ರವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಶಾಸಕ ಕೆ.ಬಿ. ಅಶೋಕ ನಾಯ್ಕ ಅವರು ಮೇ ೧೦ರಂದು ನಡೆಯಲಿರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಗಳಿಸಿ ಗೆಲುವು ಸಾಧಿಸಲಿದ್ದಾರೆ ಎಂದು ಉತ್ತರಾಖಂಡ ರಾಜ್ಯದ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿವಮೊಗ್ಗ ಜಿಲ್ಲ ಚುನಾವಣಾ ಉಸ್ತುವಾರಿ ಕುಲದೀಪ್ ಸಿಂಗ್ ತಿಳಿಸಿದರು.


ಅವರು ಗ್ರಾಮಾಂತರ ಕ್ಷೇತ್ರದ ಚುನಾವಣಾ ಕಾರ್ಯಾಲಯದಲ್ಲಿ ಇಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಕರ್ನಾಟಕ ಹಾಗೂ ದೇಶದ ಡಬಲ್ ಇಂಜಿನ್ ಸರ್ಕಾರ ಜನಪರ ಯೋಜನೆಗಳಿಂದ ಜನಪ್ರಿಯತೆ ಗಳಿಸುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಿದೆ ಎಂದರು.
ಈ ಹಿಂದೆ ದೇಶದಲ್ಲಿ ಇದ್ದ ರಸ್ತೆಗಳನ್ನು ಗಮನಿಸಿದರೆ ಈಗಿನ ರಸ್ತೆಗಳು ಅತ್ಯುತ್ತಮವಾಗಿವೆ. ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಜಗತ್ತಿನಲ್ಲಿ ಹೆಸರು ಗಳಿಸಿದ್ದು, ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮದಿಂದ ಜಗತ್ತಿನಲ್ಲೇ ಸಾವಿನ ಸಂಖ್ಯೆ ಕಡಿಮೆ ಇದೆ. ದೇಶದಲ್ಲಿ ಉತ್ಪಾದಿಸಲಾದ ಕೋವಿಡ್ ವ್ಯಾಕ್ಸಿನ್‌ನಿಂದಾಗಿ ಮುಂದುವರೆದ ದೇಶಗಳೂ ಸಹ ಮೆಚ್ಚುಗೆ ವ್ಯಕ್ತಪಡಿಸಿವೆ ಎಂದರು.


ಹಲವಾರು ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಡಬಲ್ ಇಂಜಿನ್ ಸರ್ಕಾರದಿಂದ ಲಕ್ಷಾಂತರ ರೈತರು ಇದರ ಲಾಭ ಪಡೆದಿದ್ದಾರೆ. ಬಡವರಿಗಾಗಿ ಉಜ್ವಲ ಯೋಜನೆಯಡಿ ಉಚಿತವಾಗಿ ಗ್ಯಾಸ್ ಸಿಲಿಂಡರ್ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದ ಸಾಧನೆಯಿಂದಾಗಿ ಜಗತ್ತಿನಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದರು.
ಕಳೆದ ೨೦ ವರ್ಷದ ಹಿಂದೆ ಇದ್ದ ಶಿವಮೊಗ್ಗ ಜಿಲ್ಲೆಯ ಚಿತ್ರಣವೇ ಇಂದು ಬದಲಾಗಿದೆ. ಆರ್ಥಿಕ ಸ್ಥಿತಿಯೂ ಉತ್ತಮವಾಗಿದೆ. ಹಲವಾರು ಏತ ನೀರಾವರಿ ಯೋಜನೆಗಳಿಂದ ಕೆರೆಗಳಿಗೆ ನೀರು ಹರಿದು ರೈತರಿಗೆ ಅನುಕೂಲವಾಗಿದೆ. ಅದರಲ್ಲೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಶಾಸಕರ ಶ್ರಮದಿಂದಾಗಿ ಹಲವಾರು ಯೋಜನೆಗಳು ಅನುಷ್ಠಾನಗೊಂಡಿರುವುದು ಕ್ಷೇತ್ರದ ಜನತೆ ಕೊಂಡಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ಶಾಸಕ ಕೆ.ಬಿ. ಅಶೋಕ್ ನಾಯ್ಕ ಅವರು ಮತ್ತೊಮ್ಮೆ ಶಾಸಕರಾಗುವುದು ಖಚಿತ ಎಂದರು.


ಶಾಸಕ ಕೆಬಿ. ಅಶೋಕ್ ನಾಯ್ಕ ಮಾತನಾಡಿ, ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಐದು ಏತನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಇದರಿಂದ ಸುಮಾರು ೧೬೫ ಕೆರೆಗಳಿಗೆ ನೀರು ಹರಿಸಿ ರೈತರ ಬದುಕನ್ನು ಹಸನು ಮಾಡಲಾಗುತ್ತಿದೆ. ೧೨೮ ದೇವಸ್ಥಾನಗಳ ಅಭಿವೃದ್ಧಿ, ವಿದ್ಯುತ್ ಯೋಜನೆ, ಕುಡಿಯುವ ನೀರಿನ ಯೋಜನೆ, ಬಡವರಿಗೆ ಮನೆ, ನಿವೇಶನ ಸೌಲಭ್ಯ, ರಸ್ತೆಗಳ ಅಭಿವೃದ್ಧಿ, ಸೇರಿದಂತೆ ಹಲವಾರು ಯೋಜನೆಗಳನ್ನು ಕೈಗೊಂಡು ಶಾಶ್ವತ ಪರಿಹಾರ ನೀಡಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಕ್ಷೇತ್ರದ ಪ್ರವಾಸಿ ಪ್ರಭಾರಿ ಉತ್ತರಾಖಂಡದ ಮಾಜಿ ಶಾಸಕ ಮುಖೇಶ್ ಕೂಲಿ, ಮುಖಂಡರಾದ ಎಸ್.ದತ್ತಾತ್ರಿ, ರತ್ನಾಕರ ಶೆಣೈ, ವಿರೂಪಾಕ್ಷಪ್ಪ, ಸಿಂಗನಹಳ್ಳಿ ಸುರೇಶ್ ಮತ್ತಿತರರಿದ್ದರು.

ವರದಿ ಪ್ರಜಾ ಶಕ್ತಿ…