ಶಿವಮೊಗ್ಗ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಶ್ರೀ ಮಿಥುನ್ ಕುಮಾರ್ ಜಿ.ಕೆ ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ ರಾಗಿಗುಡ್ದದ ಮುಖಂಡರ ಸಭೆಯನ್ನು ನಡೆಸಿ, ಈ ಕೆಳಕಂಡ ಸಲಹೆ ಸೂಚನೆಗಳನ್ನು ನೀಡಿದರು.

1) ಯಾರೇ ಆಗಲಿ ಅಪರಾಧವನ್ನು ಮಾಡಿದ್ದಲ್ಲಿ ಅವರಿಗೆ ಕಡ್ಡಾಯವಾಗಿ ಶಿಕ್ಷೆಯಾಗಬೇಕಿರತ್ತದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳುತ್ತದೆ ಮತ್ತು ಇದರಿಂದ ಆ ವ್ಯಕ್ತಿಗೆ ತಾನು ಮಾಡಿದ ತಪ್ಪಿನ ಪರಿಣಾಮದ ಬಗ್ಗೆ ತಿಳುವಳಿಕೆ ಬರುತ್ತದೆ.

2) ಕಿಡಿಗೇಡಿತನವೆಸಗುವವರು ಎಲ್ಲಾ ಕಡೆಗಳಲ್ಲಿ ಇರುತ್ತಾರೆ. ಅವರು ಮಾಡುವ ಕಿಡಿಗೇಡಿತನವನ್ನು ಯಾವಾಗ ಪ್ರಶ್ನೆ ಮಾಡುವುದಿಲ್ಲವೋ ಆಗ ಅಂತಹ ಕೆಲವು ಜನ ಮಾಡುವ ಕಿಡಿಗೇಡಿತನದಿಂದ ಉಳಿದ ಎಲ್ಲರೂ ಪರಿಣಾಮವನ್ನು ಎದುರಿಸುವಂತಾಗುತ್ತದೆ. ಆದ್ದರಿಂದ ಅವರುಗಳಿಗೆ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳುವ ಜವಾಬ್ದಾರಿಯು ನಮ್ಮೆಲ್ಲರದ್ದಾಗಿರುತ್ತದೆ.

3) ರಾಗಿಗುಡ್ಡದ ಆಯ್ದ ವ್ಯಕ್ತಿಗಳನ್ನು ಒಳಗೊಂಡ ಶಾಂತಿ ಸಮಿತಿ ಮತ್ತು ಯುವಕರುಗಳನ್ನು ಒಳಗೊಂಡ ಯುವಪಡೆಯನ್ನು ರಚಿಸಿ ಅವರುಗಳ ವಾಟ್ಸ್ ಗ್ರೂಪ್ ಸೃಜಿಸಲಾಗುವುದು. ಇವರು ಪೊಲೀಸ್ ಇಲಾಖೆಯೊಂದಿಗೆ ಪ್ರಾಥಮಿಕ ಪ್ರತಿಸ್ಪಂದಕ (First Responder) ರಂತೆ ಕಾರ್ಯ ನಿರ್ವಹಿಸಲಿದ್ದಾರೆ ಮತ್ತು ನಮ್ಮ ಏರಿಯಾ ನಮ್ಮ ಜವಾಬ್ದಾರಿ ಎಂಬ ದ್ಯೇಯದೊಂದಿಗೆ ಬೀಟ್ ಸಿಬ್ಬಂಧಿಗಳೊಂದಿಗೆ ಗಸ್ತು ಮಾಡುವುದು ಹಾಗೂ ತಮ್ಮ ಏರಿಯಾದಲ್ಲಿ ಜರುಗುವ ಅಹಿತಕರ ಘಟನೆ, ಗಲಾಟೆ, ಅಕ್ರಮ ಚಟುವಟಿಕೆಗಳು, ಮತ್ತು ಕಿಡಿಗೇಡಿತನದ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ಕೂಡಲೇ ಬೀಟ್ ಸಿಬ್ಬಂಧಿ / ಪೊಲೀಸ್ ಠಾಣೆ / 112 ತುರ್ತು ಸಹಾಯವಾಣಿಗೆ ಮಾಹಿತಿ ನೀಡುವುದು ಶಾಂತಿ ಸಮಿತಿ ಮತ್ತು ಯುವಪಡೆ ಸದಸ್ಯರ ಮುಖ್ಯ ಕರ್ತವ್ಯವಾಗಿರುತ್ತದೆ.

4) ರಾಗಿಗುಡ್ಡದಲ್ಲಿ ಸ್ವಚ್ಚತೆಯನ್ನು ಕಾಪಾಡುವ ದೃಷ್ಠಿಯಿಂದ ಮಹಾನಗರ ಪಾಲಿಕೆ ಮತ್ತು ರಾಗಿಗುಡ್ಡದ ಸಾರ್ವಜನಿಕರು ಸೇರಿ ಮುಂದಿನ ದಿನಗಳಲ್ಲಿ ಶ್ರಮಾಧಾನ ಮಾಡುವುದು. ಇದಕ್ಕೆ ಪೊಲೀಸ್ ಇಲಾಖೆಯು ಸಹಾ ಸಹಕಾರ ನೀಡಿ ಕೈ ಜೋಡಿಸಲಿದೆ.

5) ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಸಾರ್ವಜನಿಕರ ಸಹಕಾರದೊಂದಿಗೆ ಕಳೆದ 10 ದಿನಗಳಲ್ಲಿ ರಾಗಿಗುಡ್ಡದ ಪ್ರಮುಖ 27 ಸ್ಥಳಗಳಲ್ಲಿ ಈಗಾಗಲೇ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುತ್ತದೆ ಮತ್ತು ರಾಗಿಗುಡ್ಡದಲ್ಲಿ ಬೀದಿ ದೀಪ ಗಳನ್ನು ಅಳವಡಿಸಿಕೊಡುವಂತೆ ಸಾರ್ವಜನಿಕರು ಕೋರಿದ್ದು, ಈ ಕುರಿತಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಬೀದಿ ದೀಪಗಳನ್ನು ಅಳವಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು.

6) ಬೀಟ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಹಾಗೂ ಇ.ಆರ್.ವಿ ವಾಹನದ ಅಧಿಕಾರಿ ಸಿಬ್ಬಧಿಗಳು ರಾತ್ರಿ ಗಸ್ತು ಮಾಡಲಿದ್ದು, ಒಂದುವೇಳೆ ರಾತ್ರಿ 10 ಗಂಟೆಯ ನಂತರ ಯಾರೇ ಆಗಲೀ ಅನಾವಶ್ಯವಾಗಿ ಓಡಾಡುತ್ತಿರುವು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

7) ರಾಗಿಗುಡ್ಡದ ಮಹಿಳೆಯರು ಹಾಗೂ ಯುವಕರ ಸಭೆಯನ್ನು ಮತ್ತು ಶಾಲಾ ಕಾಲೇಜುಗಳಲ್ಲಿ ವಿಧ್ಯಾರ್ಥಿಗಳ ಸಭೆಯನ್ನು ನಡೆಸುವುದು ಹಾಗೂ ಅಲ್ಲಿನ ಎಲ್ಲಾ ಸಾರ್ವಜನಿಕರನ್ನು ಒಳಗೊಂಡ ವಾಟ್ಸ್ ಅಪ್ ಗ್ರೂಪ್ ಅನ್ನು ರಚಿಸಿ, ರಾಗಿಗುಡ್ಡದ ನಡೆಯುವ ಸಭೆಗಳ ಮಾಹಿತಿಯನ್ನು ಇದರಲ್ಲಿ ಹಂಚಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು.

ಈ ಸಂದರ್ಭದಲ್ಲಿ ಶ್ರೀ ಅನಿಲ್ ಕುಮಾರ್ ಭುಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಶ್ರೀ ಸುರೇಶ್ ಎಂ, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ, ಶ್ರೀ ಸತ್ಯನಾರಾಯಣ್, ಪಿಐ ಶಿವಮೊಗ್ಗ ಗ್ರಾಮಾಂತರ ಮತ್ತು ರಾಗಿಗುಡ್ಡದ ಮುಖಂಡರುಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…