ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ ಡಾ.ಬಾಬು ಜಗಜೀವನರಾಂ ಮತ್ತು ಡಾ.ಬಿ.ಆರ್.ಅಂಬೇಡ್ಕರ್‍ರವರ ಜಯಂತಿಗಳನ್ನು ಸರಳವಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.


ಏ.5 ರಂದು ಡಾ.ಬಾಬು ಜಗಜೀವನರಾಂ ಮತ್ತು ಏ.14 ರಂದು ಡಾ.ಬಿ.ಆರ್.ಅಂಬೇಡ್ಕರ್‍ರವರ ಜನ್ಮ ದಿನಾಚರಣೆ ಕಾರ್ಯಕ್ರಮದ ಕುರಿತು ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಪುರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆ ಸರ್ಕಾರವು ಜಯಂತಿಗಳನ್ನು ಸರಳವಾಗಿ ಆಚರಿಸುವಂತೆ ನಿರ್ದೇಶನ ನೀಡಿದ್ದು ಅದರ ಪ್ರಕಾರ ಏ.5 ರಂದು ಡಾ.ಬಾಬು ಜಗಜೀವನರಾಂ ಮತ್ತು ಏ.14 ರಂದು ಡಾ.ಬಿ.ಆರ್.ಅಂಬೇಡ್ಕರ್‍ರವರ ಜಯಂತಿಗಳನ್ನು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ಕ್ರಮ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.


ಸಭೆಯಲ್ಲಿ ದಲಿತ ಸಂಘಟನೆಗಳ ಮುಖಂಡರುಗಳು ಮಾತನಾಡಿ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಯಂತಿಗಳನ್ನು ಯಾವುದೇ ಮೆರವಣಿಗೆ ಇಲ್ಲದೇ, ಒಳಾಂಗಣದಲ್ಲಿ ಸರಳವಾಗಿ, ಡಾ.ಬಿ.ಆರ್.ಅಂಬೇಡ್ಕರ್‍ರವರ ವಿಚಾರಧಾರೆಗಳ ಕುರಿತು ಓರ್ವ ಉಪನ್ಯಾಸಕರಿಂದ ಉಪನ್ಯಾಸ ನೀಡಲು ಹಾಗೂ ಕ್ರಾಂತಿಗೀತೆ-ಶಾಸ್ತ್ರೀಯ ಸಂಗೀತ ಗಾಯನಕ್ಕೆ ಅವಕಾಶ ನಿಡಬೇಕೆಂದರು ಕೋರಿದರು.
ಹಾಗೂ ಡಾ.ಬಾಬು ಜಗಜೀವನರಾಂ ಭವನದ ಕಾಮಗಾರಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದು, ಆದಷ್ಟು ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸಿ ಮುಂದಿನ ದಿನಗಳಲ್ಲಿ ಅಲ್ಲಿಯೇ ಡಾ.ಬಾಬು ಜಗಜೀವನರಾಂ ಜಯಂತಿ ಆಚರಣೆ ಆಗುವಂತೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಲ್ಲಿ ಮುಖಂಡರು ಮನವಿ ಮಾಡಿದರು. ಅಲ್ಲದೇ ಸರ್ಕಾರಿ ಕಚೇರಿಗಳಲ್ಲಿ ದೇವರುಗಳ ಭಾವಚಿತ್ರಗಳ ಬದಲಾಗಿ ರಾಷ್ಟ್ರನಾಯಕರ ಭಾವಚಿತ್ರಗಳನ್ನು ಇರಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿದರು.

ಸಭೆಯಲ್ಲಿ ದಲಿತ ಸಂಘಟನೆಗಳ ಮುಖಂಡರಾದ ಆರ್.ಶಿವಣ್ಣ, ಹಾಲೇಶಪ್ಪ, ರಾಜಕುಮಾರ್, ಹರಮಘಟ್ಟ ರಂಗಪ್ಪ, ಪ್ರಭು, ಬೂದಿಗೆರೆ ಬಸವರಾಜ್, ಪ್ರಕಾಶ್ ಇತರೆ ಮುಖಂಡರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲೇಶಪ್ಪ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

ವರದಿ ಪ್ರಜಾ ಶಕ್ತಿ