ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕುಟುಂಬ ಕಲ್ಯಾಣ ವಿಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಜುಲೈ 11 ರಂದು ಆಯೋಜಿಸಿರುವ ವಿಶ್ವ ಜನಸಂಖ್ಯಾ ದಿನಾಚರಣೆಯ ಅಂಗವಾಗಿ ಜನಸಂಖ್ಯಾ ನಿಯಂತ್ರಣ ಮತ್ತು ಕುಟುಂಬ ಕಲ್ಯಾಣ ಯೋಜನೆಗಳ ಅಳವಡಿಕೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪದವಿ ಪೂರ್ವ/ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸೃಜನಾತ್ಮಕ ಕಲಾ ಚಟುವಟಿಕೆಗಳನ್ನು ಸೃಜಿಸಲು ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು “ಅಭಿವೃದ್ಧಿ ಹೊಂದಿದ ಭಾರತದ ಹೊಸ ಗುರುತಿಗಾಗಿ, ಕುಟುಂಬ ಯೋಜನೆ ಅಳವಡಿಕೆಯ ಪ್ರತಿ ದಂಪತಿಗಳಿಗೆ ಹೆಮ್ಮೆ ತರುತ್ತದೆ” ಎಂಬ ಘೋಷವಾಕ್ಯದೊಂದಿಗೆ “ಸರಿಯಾದ ಸಮಯದಲ್ಲಿ ಗರ್ಭದಾರಣೆ ಹಾಗೂ ಅಂತರ ಕಾಪಾಡುವುದರಿಂದ ತಾಯಿ ಮತ್ತು ಮಗುವಿನ ಆರೋಗ್ಯ ಉತ್ತಮಗೊಳಿಸುವುದು” ಎಂಬ ಧ್ಯೇಯವನ್ನು ಅಳವಡಿಸಿದೆ.
ಈ ಸ್ಪರ್ಧೆಯಲ್ಲಿ ಸಾಕ್ಷ್ಯಚಿತ್ರ ಅಥವಾ ಕಿರುಚಿತ್ರ, ಪೋಸ್ಟರ್ ಸ್ಪರ್ಧೆ ಹಾಗೂ ರೀಲ್ಸ್ ಸ್ಪರ್ಧೆ ಎಂಬ ವಿಭಾಗಗಳಿದ್ದು, ಪ್ರತಿ ವಿಭಾಗಗಳಲ್ಲಿ ಮೂರು ಬಹುಮಾನವನ್ನು ನೀಡಲಾಗುವುದು. ಮೊದಲ ಬಹುಮಾನ ರೂ. 6000/-, ದ್ವಿತೀಯ ಬಹುಮಾನ ರೂ. 3500/- ಹಾಗೂ ತೃತೀಯ ಬಹುಮಾನ ರೂ. 2000/- ಗಳಾಗಿವೆ.