ಗರುಡ ಪುರಾಣದ ಕೆಲವು ನೀತಿವಚನಗಳು !
ಕಷ್ಟಕಾಲದಲ್ಲಿ ಚಿರಪರಿಚಿತರೂ ಕೂಡ ಮೆಲ್ಲಮೆಲ್ಲಗೆ ಹೇಗೆ ಜಾರಿಕೊಳ್ಳುತ್ತಾರೆಂದರೆ – ಪಕ್ಷಿಗಳು ಹಣ್ಣುಗಳಿಲ್ಲದ ಮರವನ್ನು ಬಿಟ್ಟುಹೋಗುತ್ತವೆ. ನೀರು ಬತ್ತಿದ ಕೊಳದಲ್ಲಿ ಕಮಲಗಳಿರುವುದಿಲ್ಲ. ಹೂವು ಬಾಡಿದರೆ ದುಂಬಿಗಳು ಅಲ್ಲಿಗೆ ಬರುವುದಿಲ್ಲ. ಸುಟ್ಟುಹೋದ ಅಡವಿಯಲ್ಲಿ ಪ್ರಾಣಿಗಳು ಉಳಿಯಲಾರವು. ಅಂತೆಯೇ ಕಷ್ಟಕಾಲದಲ್ಲಿ ಚಿರಪರಿಚಿತರೂ ದೂರವಾಗುತ್ತಾರೆ. ಆದರೆ ಈ ಎಲ್ಲವೂ ಪುನಃ ಒಮ್ಮೆ ತಮ್ಮ ಮೊದಲಿನ ಸ್ವರೂಪವನ್ನು ಪಡೆದುಕೊಂಡರೆ ಎಲ್ಲರೂ, ಎಲ್ಲವೂ ಪುನಃ ಬಂದು ಆಶ್ರಯಿಸುತ್ತವೆ. ಸ್ವಾರ್ಥದ ಸ್ವಭಾವಸ್ವರೂಪವು ಹೇಗಿರುತ್ತದೆ ಎಂಬುದನ್ನು ಈ ನೀತಿ ತಿಳಿಸುತ್ತದೆ. ವಿನಾಕಾರಣ ಅನ್ಯರ ಮನೆಯಲ್ಲಿ ವಾಸ ಮಾಡಬಾರದು.’ ‘ಮೂರ್ಖ ಶಿಷ್ಯನಿಗೆ ಪಾಠ ಹೇಳುವುದರಿಂದಲೂ, ಕೆಟ್ಟ ಸ್ವಭಾವದ ಹೆಂಡತಿಯನ್ನು ಪಡೆಯುವುದರಿಂದಲೂ, ಮಹಾಮೇಧಾವಿಯೂ ಗೌರವವನ್ನು ಕಳೆದುಕೊಳ್ಳುತ್ತಾನೆ. ಶತ್ರುಗಳಾದರೂ ನಮ್ಮ ಹಿತವನ್ನು ಬಯಸುವುದಾದರೆ ಅವರೇ ನಿಜವಾದ ಬಂಧುಗಳು. ನೆಂಟನಾದವನು ನಮ್ಮ ವಿನಾಶವನ್ನು ಬಯಸುತ್ತಿದ್ದರೆ ಅವನೇ ನಿಜವಾದ ಶತ್ರು. ನಮ್ಮಲ್ಲಿ ಉಂಟಾದ ರೋಗ ನಮಗೆ ಶತ್ರು. ದೂರದ ಅಡವಿಯಲ್ಲಿದ್ದ ಔಷಧವು ನಮಗೆ ಮಿತ್ರ.
ಯಾವ ಪ್ರದೇಶದಲ್ಲಿ ನಮಗೆ ಗೌರವ, ಆದರ ಮತ್ತು ಬಂಧುಗಳಿರುವುದಿಲ್ಲವೋ ಮತ್ತು ವಿದ್ಯೆಯನ್ನು ಸಂಪಾದಿಸುವ ಅವಕಾಶವಿರುವುದಿಲ್ಲವೋ ಆ ಪ್ರದೇಶವನ್ನು ಬಿಡುವುದೇ ಲೇಸು. ಉತ್ತಮ ಅಧ್ಯಯನವನ್ನು ಮಾಡಬೇಕೆಂಬುವವನು ನಿದ್ರೆ ಆಹಾರಗಳನ್ನು ಕುರಿತು ಚಿಂತಿಸಬಾರದು.
ಗರುಡನು ಎಷ್ಟೂ ದೂರವಾದರೂ ಹೋಗಿ ತನ್ನ ಗುರಿಯನ್ನು ಸಾಧಿಸುತ್ತಾನಷ್ಟೆ!’; – ‘ನೂರಾರು ಗೋವುಗಳಿದ್ದರೂ ಕರುವು ಅದರಲ್ಲಿ ತನ್ನ ತಾಯಿಯನ್ನು ಗುರುತಿಸಿ ಹೇಗೆ ತನ್ನ ತಾಯಿಯನ್ನೇ ಸೇರಿಕೊಳ್ಳುತ್ತದೆಯೋ, ಹಾಗೆ ಮಾಡಿದ ಪುಣ್ಯ-ಪಾಪಗಳು ಆ ಕರ್ತನನ್ನೇ ಅನುಸರಿಸುತ್ತವೆ.
ರೋಗಗಳು ಯಾರಿಗಾದರೂ ಬರಬಹುದು, ಸಂಪತ್ತು ಯಾರನ್ನಾದರೂ ಬಿಡಬಹುದು.
ಜಿಪುಣನ ಕೈಯಲ್ಲಿನ ಹಣ, ಒರಟನ ಹತ್ತಿರದ ಜ್ಞಾನ, ಪರಾಕ್ರಮವಿಲ್ಲದ ಅಂದಚೆಂದಗಳು, ಕಷ್ಟಕಾಲದಲ್ಲಿ ಸಹಾಯಕ್ಕೆ ಬಾರದ ಮೈತ್ರಿ ವ್ಯರ್ಥ’;
ಕೆಟ್ಟವರ ಸಹವಾಸ ಮಾಡಿದರೆ ಇಹವೂ ಇಲ್ಲ ಪರವೂ ಇಲ್ಲ ಆದ್ದರಿಂದ ಉತ್ತಮರ ಸಹವಾಸವನ್ನೇ ಮಾಡಬೇಕು.
ಇಂತಹ ಅಸಂಖ್ಯಾತ ನೀತಿಗಳಿಂದ ತುಂಬಿದ ಗರುಡಪುರಾಣವು ಅದ್ಭುತ ಗ್ರಂಥವಾಗಿದೆ.

ಲೇಖನ: ಸುಗಂಧಿ ವಕೀಲರು ಪ್ರಜಾಶ್ರೀ ಪತ್ರಿಕಾ ಸಂಪಾದಕರು ಬೆಂಗಳೂರು

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153