ಸದೃಢ ದೇಶ ನಿರ್ಮಾಣ ಮಾಡುವಲ್ಲಿ ಯುವಜನರ ಪಾತ್ರ ಮಹತ್ತರವಾಗಿದ್ದು ದೇಶದ ಪ್ರಗತಿಗೆ ಯುವಜನತೆ ಕೈಜೋಡಿಸಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ಅಭಿಪ್ರಾಯಪಟ್ಟರು.
ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ರಾಷ್ಟ್ರೀಯ ಸೇವಾ ಯೋಜನೆ, ಸರ್ಕಾರಿ ಮಹಿಳಾ ಪದವಿ ಕಾಲೇಜು, ಡಿ.ವಿ.ಎಸ್ ಕಾಲೇಜು, ಆಚಾರ್ಯ ತುಳಸಿ ರಾಷ್ಟ್ರೀಯ ಕಾಲೇಜು, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಘ,ಶಿವಮೊಗ್ಗ ಇವರ ಸಹಯೋಗದೊಂದಿಗೆ “ಯೆ ದೀಪಾವಳಿ ಮೈ ಭಾರತ್ ಕೆ ಸಾಥ್” ಎಂಬ ಶೀರ್ಷಿಕೆಯೊಂದಿಗೆ ಅಕ್ಟೋಬರ್ 27 ರಿಂದ 30ರವರೆಗೆ ದೀಪಾವಳಿ ಹಬ್ಬವನ್ನು ಉತ್ತಮವಾಗಿ ಆಚರಿಸಲು ಸ್ಥಳೀಯರು, ಸ್ವಯಂಸೇವಕರು, ಯುವಕ/ಯುವತಿ ಸಂಘದ ಸದಸ್ಯರಿಂದ ಮಾರ್ಕೆಟ್ ಕ್ಲೀನಿಂಗ್- ಇನ್ನು ಮುಂತಾದ ಸ್ಥಳಗಳಲ್ಲಿ ಏರ್ಪಡಿಸಲಾಗಿದ್ದ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಯುವಜನರು ಪರಿಸರ ಸಂರಕ್ಷಣೆ ಮಾಡುವ ವಿಶೇಷ ಸಂಕಲ್ಪ ಹೊಂದಬೇಕು. ಕಾಳಜಿ ವಹಿಸುವ ಮೂಲಕ ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು. ಸ್ವಚ್ಛ ನಗರ ನಿರ್ಮಾಣ ಮಾಡಲು ಸಹಕಾರ ನೀಡಬೇಕು. ನಾವೆಲ್ಲರೂ ಸೇರಿ ಸ್ವಚ್ಛ ಹಾಗೂ ಸುಂದರ ನಗರ ನಿರ್ಮಿಸೋಣ ಎಂದು ತಿಳಿಸಿದರು.
ಸಮಾಜ ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಪ್ರತಿಯೊಬ್ಬರ ಪಾತ್ರವೂ ಮುಖ್ಯ ಆಗಿರುತ್ತದೆ. ಎಲ್ಲೆಂದರಲ್ಲಿ ಕಸ ಎಸೆಯದೆ ಸೂಕ್ತ ಸ್ಥಳಗಳಲ್ಲಿ ವಿಲೇವಾರಿ ಮಾಡಬೇಕು. ಶ್ರಮದಾನ ಮಾಡುವ ಮೂಲಕ ಸಾರ್ವಜನಿಕ ಸ್ಥಳಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳಲು ನಾವೆಲ್ಲರೂ ಮುಂದಾಗಬೇಕು. ಆರೋಗ್ಯಯುತ ವಾತಾವರಣ ನಿರ್ಮಾಣ ನಮ್ಮ ಗುರಿಯಾಗಬೇಕು. ಹಸಿರು ಪಟಾಕಿಗಳನ್ನು ಬಳಸುವುದರ ಮೂಲಕ ಮಾಲಿನ್ಯ ಕಡಿಮೆ ಮಾಡಬೇಕು ಎಂದರು.
ಕುವೆAಪು ವಿಶ್ವವಿದ್ಯಾಲಯ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಶುಭಾ ಮರವಂತೆ ಮಾತನಾಡಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶೇಷ ಅಭಿಯಾನ ನಡೆಸುತ್ತಿದ್ದು, ಎಲ್ಲರೂ ಶ್ರಮದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ದೀಪಾವಳಿ ಹಬ್ಬದ ಪ್ರಯುಕ್ತ ‘ಯೇ ದೀಪಾವಳಿ ಮೈ ಭಾರತ್ ಕೆ ಸಾಥ್’ ಕಾರ್ಯಕ್ರಮದಲ್ಲಿ 230 ಕ್ಕೂ ಹೆಚ್ಚು ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಪಾಲ್ಗೊಂಡು ನಗರದ ಬಿ.ಹೆಚ್. ರಸ್ತೆ, ಗಾಂಧಿ ಬಜಾರ್ ಹೂವಿನ ಮಾರುಕಟ್ಟೆ, ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಚಗೊಳಿಸಲಾಯಿತು.
ನೆಹರು ಯುವ ಕೇಂದ್ರದ, ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್ ಕೆ.ಟಿ.ಕೆ, ಆಚಾರ್ಯ ತುಳಸಿ ರಾಷ್ಟ್ರೀಯ ಕಾಲೇಜಿನ ಎನ್. ಎಸ್ . ಎಸ್. ಕಾರ್ಯಕ್ರಮ ಅಧಿಕಾರಿ ನಾಗರಾಜ್ , ಸರ್ಕಾರಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ನವೀನ್, ನೆಹರು ಯುವ ಕೇಂದ್ರದ ಲೆಕ್ಕ ಮತ್ತು ಕಾರ್ಯಕ್ರಮ ಸಹಾಯಕ ರಮೇಶ್, ಹಾಗೂ ಕಾಲೇಜಿನ ವಿದ್ಯಾರ್ಥಿಗಳು, ಸ್ವಯಂಸೇವಕರುಗಳು, ಯುವಕ/ಯುವತಿ ಸಂಘಗಳ ಸದಸ್ಯರುಗಳು ಉಪಸ್ಥಿತರಿದ್ದರು.