ಶಿವಮೊಗ್ಗ :- ಪ್ರಸ್ತುತದ ದಿನಗಳಲ್ಲಿ ಹಿಂದೂ ಸಮಾಜದ ಎಲ್ಲಾ ಸಮುದಾಯಗಳು ಒಟ್ಟಾಗಿ ನಡೆಯುವ ಅನಿವಾರ್ಯತೆ ಇದ್ದು, ಪೋಷಕರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಕಾಳಜಿ, ಜಾಗ್ರತೆ ವಹಿಸುವುದು ಮುಖ್ಯವಾಗಿದೆ ಎಂದು ರಾಷ್ಟ್ರಭಕ್ತ ಬಳಗದ ಯುವ ನಾಯಕ ಕೆ.ಈ. ಕಾಂತೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಭಾವಸಾರ ವಿಷನ್ ಇಂಡಿಯಾ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಸಾಂಸ್ಕೃತಿಕ ಹಬ್ಬ ಎಂಬ ಮನೋರಂಜನಾ ಕಾರ್ಯಕ್ರಮಕ್ಕೆ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಹಿಂದೂಗಳು ತಮ್ಮ ಮನೆಯ ಹೆಣ್ಣುಮಕ್ಕಳ ಸುರಕ್ಷತೆಗೆ ಹೆಚ್ಚು ನೀಡಬೇಕು. ಲವ್ ಜಿಹಾದ್ ಎಂಬ ಬಲೆಯೂ ನಮ್ಮ ಮನೆಯ ಶಾಂತಿ ಕದಡುತ್ತಿದೆ. ಹೀಗಾಗಿ ಯಾವುದೇ ಆಮೀಷಗಳಿಗೆ ಬಲಿಯಾಗದೇ ಹಿಂದೂ ಯುವತಿಯರು ತಮ್ಮತನವನ್ನು ಕಾಪಾಡಿಕೊಂಡು, ಹಿಂದೂ ಸಮಾಜದ ರಕ್ಷಣೆಗೆ ನಿಲ್ಲಬೇಕೆಂದು ಕರೆ ನೀಡಿದರು. ಭಾವಸಾರ ಸಮಾಜದ ಜೊತೆಗೆ ತಾವು ಎಂದಿಗೂ ಇದ್ದು, ಬಿವಿಐ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಹಾರೈಸಿದರು. ಸದಾಕಾಲ ಯಾವುದಾದರೂ ಸಮಾಜಕಾರ್ಯದ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಇತರರ ಕಷ್ಟಗಳಿಗೆ ನೆರವಾಗುವುದು ಉತ್ತಮ ಬೆಳವಣಿಗೆ ಎಂದರು.

ಈ ವೇಳೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಭಾರತಿ, ಕಾರ್ಯಕ್ರಮದಲ್ಲಿದ್ದ ಬಂಧುಗಳಿಗೆ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸಿದರು. ಚಿಕ್ಕಮಕ್ಕಳು ಕೂಡ ಹೆಲ್ಮೆಟ್ ಧರಿಸಿಯೇ ವಾಹನ ಸವಾರಿ ಮಾಡಬೇಕು. ಜೊತೆಗೆ ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ಕೋಟಿಗಟ್ಟಲೇ ರೂ. ದಂಡ ವಿಧಿಸಲಾಗಿದೆ. ಟ್ರಾಫಿಕ್ ನಿಯಮ ಪಾಲಿಸಿ ದಂಡದಿಂದ ದೂರವಿರಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು‌.

ಕಾರ್ಯಕ್ರಮದಲ್ಲಿ ಬಿವಿಐ ಶಿವಮೊಗ್ಗ ಅಧ್ಯಕ್ಷೆ ನಂದಾ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ, ಉಪಾಧ್ಯಕ್ಷ ಸಚಿನ್ ಬೇದ್ರೆ, ಕಾರ್ಯದರ್ಶಿ ಸುನಿಲ್ ಗುಜ್ಜರ್, ಸಂಸ್ಥೆ ಗವರ್ನರ್ ಸುನಿಲ್ ಬೇದ್ರೆ, ಖಜಾಂಚಿ ಸ್ವಪ್ನ ಹರೀಶ್, ಮಹಿಳಾ ಕಲ್ಯಾಣ ನಿರ್ದೇಶಕಿ ಕೋಮಲ್, ಬುಲೆಟಿನ್ ಎಡಿಟರ್ ಲತಾ ಬೇದ್ರೆ, ನಿಖಿಲ್, ಸುನಿಲ್ ಕಮಲಾಕರ್, ಸೇರಿದಂತೆ ಹಲವರಿದ್ದರು.