ನಿಯಮಿತ ಆರೋಗ್ಯ ತಪಾಸಣೆಯಿಂದ ದೀರ್ಘಕಾಲದವರೆಗೆ ಆರೋಗ್ಯ
ಕಾಪಾಡಿಕೊಳ್ಳಬಹುದಾಗಿದೆ. ಆರಂಭಿಕ ಹಂತದಲ್ಲಿಯೇ ರೋಗ ಪತ್ತೆಯಾದರೆ ಸೂಕ್ತ ಚಿಕಿತ್ಸೆ
ಪಡೆಯಬಹುದಾಗಿದೆ ಎಂದು ವಿಧಾನ ಪರಿಷತ್ ಶಾಸಕಿ ಬಲ್ಕಿಶ್ ಬಾನು ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯು ಮೆಟ್ರೋ ಆಸ್ಪತ್ರೆ,
ಮಾತೃವಾತ್ಸಲ್ಯ ಆಸ್ಪತ್ರೆ, ಹೃದಯ ಸೆಷಾಲಿಟಿ ಕ್ಲಿನಿಕ್ ಹಾಗೂ ಕ್ರಿಷ್ ಕಿಡ್ನಿಕೇರ್
ಸೆಂಟರ ಸಹಭಾಗಿತ್ವದಲ್ಲಿ ನಗರದಲ್ಲಿ ಪತ್ರಕರ್ತರು ಹಾಗೂ ಕುಟುಂಬದವರಿಗಾಗಿ
ಅಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ತಪಾಸಣಾ ಶಿಬಿರ ಅತ್ಯುತ್ತಮ ಕಾರ್ಯಕ್ರಮ. ಸಂಘಸಂಸ್ಥೆಗಳು ತಮ್ಮ ತಮ್ಮ
ಸದಸ್ಯರಿಗಾಗಿ ಇಂತಹ ಶಿಬಿರಗಳನ್ನು ಆಯೋಜನೆ ಮಾಡಿ ಆರೋಗ್ಯ ಜಾಗೃತಿ ಮೂಡಿಸಬೇಕಿದೆ.
ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಅತೀ ಮುಖ್ಯವಾಗಿವೆ. ಇಂದು ಆರೋಗ್ಯ ಹಾಗೂ ಶಿಕ್ಷಣ
ಸಂಪತ್ತಾಗಿವೆ ಎಂದರು.
ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಆದರೆ ಇಂದು ರಾಸಾಯನಿಕ
ಬಳಕೆಯಿಂದ ಆಹಾರ ಪದಾರ್ಥಗಳು ಕಲಬೆರಕೆಯಾಗುತ್ತಿವೆ. ಇದರಿಂದಾಗಿಯೂ ಆರೋಗ್ಯ ಸಮಸ್ಯೆ
ಹೆಚ್ಚಾಗುತ್ತಿವೆ. ನಮ್ಮ ಚಿಂತನೆಗಳು ಕೂಡ ಧನಾತ್ಮಕವಾಗಿದ್ದರೆ ಆರೋಗ್ಯ
ಕಾಪಾಡಿಕೊಳ್ಳಬಹುದಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಎಷ್ಟೇ
ಹಣವಿದ್ದರೂ ಆರೋಗ್ಯ ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸರ್ಕಾರ ಕೂಡ
ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ನೀಡಿದೆ. ಕೊರೊನಾದಂತಹ ಸಂದರ್ಭದಲ್ಲಿ ಬಹಳಷ್ಟು
ಜನರು ಜೀವ ಕಳೆದುಕೊಳ್ಳಬೇಕಾಯಿತು. ಅಂತಹ ಸಂದರ್ಭದಲ್ಲಿಯೂ ಪತ್ರಕರ್ತರು ಕೂಡ
ಕ್ಷೇತ್ರದಲ್ಲಿದ್ದು ಕೆಲಸ ಮಾಡಿದ್ದಾರೆ ಎಂದರು.
ನಾಲ್ಕನೇ ಅಂಗವೆನ್ನುವ ಪತ್ರಿಕಾ ರಂಗದಲ್ಲಿರುವವರಿಗೆ ಯಾವುದೇ ಸೌಲಭ್ಯ ಸರ್ಕಾರದಿಂದ
ಸಿಕ್ಕುತ್ತಿಲ್ಲ. ಸೌಲಭ್ಯಗಳನ್ನು ಕೊಡುವ ನಿಟ್ಟಿನಲ್ಲಿ ಸರ್ಕಾರ ಕೂಡ
ಚಿತ್ತಹರಿಸಬೇಕಿದೆ. ಸಮಸ್ಯೆಗಳನ್ನು ಗಮನಕ್ಕೆ ತಂದರೆ ಸರ್ಕಾರಕ್ಕೆ ತಿಳಿಸಲಾಗುತ್ತದೆ
ಎಂದರು.
ಮೆಟ್ರೋ ಆಸ್ಪತ್ರೆಯ ವೈದ್ಯರಾದ ಡಾ.ಪೃಥ್ವಿ ಮಾತನಾಡಿ, ನಾನ್ ಕಮ್ಯುನಿಕಲ್ ಡಿಸೀಸ್
ಬಗ್ಗೆ ಮೊದಲೇ ತಿಳಿದಿರಬೇಕು. ಇಂತಹ ಕಾಯಿಲೆಗಳು ಯಾವಾಗಲೂ ಕೊರೆಯುತ್ತಿರುತ್ತವೆ.
ಕಾಯಿಲೆಗಳ ಬಗ್ಗೆ ಮೊದಲೇ ತಿಳಿದುಕೊಳ್ಳಲು ಇಂತಹ ಶಿಬಿರಗಳು ಅನುಕೂಲವಾಗಲಿವೆ ಎಂದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್ ಕುಮಾರ್,
ಡಾ.ದಯಾನಂದ, ಡಾ. ನಾಗಮಣಿ, ಡಾ. ಮಹೇಶ್ ಮೂರ್ತಿ ಇದ್ದರು.