ಕೆ.ಎಸ್.ಸಿ.ಎಸ್.ಟಿ ಮತ್ತು ಜೆ.ಎನ್ ಎಂಜಿನಿಯರಿಂಗ್ ಕಾಲೇಜಿನಿಂದ ಆಯೋಜನೆ

ಆ.1,2 : ಎಂಜಿನಿಯರಿಂಗ್ ವಿದ್ಯಾರ್ಥಿಗಳ ನಾವೀನ್ಯ ಯೋಜನೆಗಳ ಪ್ರದರ್ಶನ

ಶಿವಮೊಗ್ಗ: ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ವತಿಯಿಂದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಹಯೋಗದಲ್ಲಿ ಆ.1 ಮತ್ತು 2 ರಂದು ಕಾಲೇಜಿನ ಆವರಣದಲ್ಲಿ 48 ನೇ ರಾಜ್ಯ ಮಟ್ಟದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಪೋಸ್ಟರ್ ಪ್ರಸ್ತುತಿ ಮತ್ತು ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.

ಆ.1 ರ ಶುಕ್ರವಾರ ಕಾಲೇಜಿನ ಅನನ್ಯ ಮಂಟಪದಲ್ಲಿ ಬೆಳಗ್ಗೆ 10:30 ಕ್ಕೆ ನಡೆಯುವ ಉದ್ಘಾಟನಾ ಸಮಾರಂಭವನ್ನು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ ಸಂಶೋಧನಾ ವಿಭಾಗದ ಹಿರಿಯ ವಿಜ್ಞಾನಿ ಡಾ.ಪ್ರಶಾಂತ್ ಮಿಶ್ರ ಉದ್ಘಾಟಿಸಲಿದ್ದು, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಅಶೋಕ.ಎಂ.ರಾಯಚೂರು, ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ, ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಆ.2 ರ ಶನಿವಾರ ಅಪರಾಹ್ನ 3:00 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಈ.ಸುಧೀಂದ್ರ ಸಮಾರೋಪ ನುಡಿಗಳನ್ನಾಡಲಿದ್ದು, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಕಾರ್ಯದರ್ಶಿ ಪ್ರೊ.ಅಶೋಕ.ಎಂ.ರಾಯಚೂರು, ಎನ್ಇಎಸ್ ಖಜಾಂಚಿ ಡಿ.ಜಿ.ರಮೇಶ್, ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಂದು ಬೆಂಗಳೂರಿನ ಐ.ಐ.ಎಸ್.ಸಿ ಪ್ರಾಧ್ಯಾಪಕ ಪ್ರೊ.ಎಲ್.ಉಮಾನಂದ ವಿದ್ಯಾರ್ಥಿಗಳಿಗೆ ‘ಇ-ಮೊಬಿಲಿಟಿ ವ್ಯವಸ್ಥೆಯಲ್ಲಿನ ಸವಾಲುಗಳು’ ಕುರಿತಾಗಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕೆ.ಎಸ್.ಸಿ.ಎಸ್.ಟಿ ಹಿರಿಯ ಪ್ರಾಜೆಕ್ಟ್ ಮ್ಯಾನೇಜರ್ ಕೆ.ಎನ್.ವೆಂಕಟೇಶ್ ಮಾತನಾಡಿ,1975 ರಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಪ್ರಾರಂಭಗೊಂಡ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು, ಗ್ರಾಮೀಣಾಭಿವೃದ್ಧಿ ಮತ್ತು ನಗರ ಪ್ರದೇಶದ ಸವಾಲುಗಳನ್ನು ಯುವ ಸಮೂಹದ ನಾವೀನ್ಯ ಚಿಂತನೆಗಳ ಮೂಲಕ ಬಗೆಹರಿಸುವ ಪ್ರಯತ್ನ ಮಾಡುತ್ತಿದೆ. ಶಿಕ್ಷಣ, ಬಯೋಡೈವರ್ಸಿಟಿ, ಜಲಸಂಪನ್ಮೂಲ ಬಳಕೆ, ಗೃಹಪಯೋಗ ಸೇರಿದಂತೆ ವಿವಿಧ ಕ್ಷೇತ್ರಗಳ ಸವಾಲುಗಳನ್ನು ಬಗೆಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಇ-ಲರ್ನಿಂಗ್ ಕೇಂದ್ರಗಳು, ತ್ರಿಡಿ ತಂತ್ರಜ್ಞಾನಗಳ ಬಳಕೆಯಂತಹ ಪ್ರೇರಣೀಯ ಕಾರ್ಯ ಮಾಡುತ್ತಿದೆ. ಜೊತೆಯಲ್ಲಿ ಸ್ಟಾರ್ಟ್ ಅಪ್ ಗಳನ್ನು ಹೆಚ್ಚು ಸ್ಥಾಪಿಸಲು ಯುವ ಸಮೂಹಕ್ಕೆ ಉತ್ತೇಜನೆ ನೀಡಲಾಗುತ್ತಿದೆ.

ಇದರೊಂದಿಗೆ ನೈಸರ್ಗಿಕ ಸಂಪನ್ಮೂಲಗಳ ದತ್ತಾಂಶಗಳನ್ನು ಕ್ರೋಡೀಕರಿಸಿ ನಿರ್ವಹಿಸುವ ಕೇಂದ್ರವನ್ನು ಪ್ರತಿ ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದ್ದು, ಜಿಲ್ಲೆಯ ನೈಸರ್ಗಿಕ ಸಂಪನ್ಮೂಲಗಳು, ಜನಸಂಖ್ಯಾಶಾಸ್ತ್ರ, ಕೃಷಿ ಮತ್ತು ಸಾಮಾಜಿಕ ಆರ್ಥಿಕತೆ, ಮೂಲಸೌಕರ್ಯ ಸೌಲಭ್ಯಗಳ ಕುರಿತು ಡಿಜಿಟಲ್ ಡೇಟಾಬೇಸ್ ಅನ್ನು ರಚಿಸಿ ನಿರ್ವಹಿಸುವಂತಹ ಪ್ರಮುಖ ಉದ್ದೇಶ ಈ ಕೇಂದ್ರದಾಗಿದೆ ಎಂದು ವಿವರಿಸಿದರು.


440 ನಾವೀನ್ಯ ಯೋಜನೆಗಳ ಪ್ರದರ್ಶನ…

ಎರಡು ದಿನಗಳ‌ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ‌ 440 ನಾವೀನ್ಯ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನಗೊಳ್ಳಲಿದ್ದು, 180 ಪೋಸ್ಟರ್ ಗಳು ಪ್ರಸ್ತುತಗೊಳ್ಳಲಿದೆ.‌ ಈ ಎಲ್ಲಾ ನಾವೀನ್ಯ ಯೋಜನೆಗಳನ್ನು ಐ.ಐ.ಎಸ್.ಸಿ, ಎನ್.ಎ.ಎಲ್, ಸಿ.ಎಂ.ಟಿ.ಐ ಸಂಸ್ಥೆಗಳ 21 ಪರಿಣಿತ ವಿಜ್ಞಾನಿಗಳು ಮೌಲ್ಯಮಾಪನ ನಡೆಸಲಿದ್ದು, ಸುಮಾರು 50 ಯೋಜನೆಗಳಿಗೆ ‘ವರ್ಷದ ಅತ್ಯುತ್ತಮ ಯೋಜನೆ’ ಬಹುಮಾನ ನೀಡಲಾಗುತ್ತಿದೆ‌. ವಿವಿಧ ಕಾಲೇಜುಗಳ 750 ಕ್ಕೂ ಅಧಿಕ ವಿದ್ಯಾರ್ಥಿಗಳು, 180 ಕ್ಕೂ ಹೆಚ್ಚು ಪ್ರಾಧ್ಯಾಪಕರು ಭಾಗವಹಿಸಲಿದ್ದಾರೆ.


ಸುದ್ದಿಗೋಷ್ಟಿಯಲ್ಲಿ ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ, ಜೆ.ಎನ್.ಎನ್.ಸಿ.ಇ ಪ್ರಾಂಶುಪಾಲರಾದ ಡಾ‌.ವೈ‌.ವಿಜಯಕುಮಾರ್, ಕಾರ್ಯಕ್ರಮ ಸಂಯೋಜಕರಾದ ಡಾ.ಬಿ.ಎನ್‌.ರವಿಕುಮಾರ್, ಡಾ.ಚೇತನ್.ಎಸ್.ಜಿ, ಎನ್ಇಎಸ್ ಪಿ.ಆರ್.ಓ ಸಿ.ಎಂ.ನೃಪತುಂಗ ಉಪಸ್ಥಿತರಿದ್ದರು.