ತಿಲಕನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಹೊರವಲಯ ಬೊಮ್ಮನಕಟ್ಟೆಯ ಶ್ರೀ ರಾಘವೇಂದ್ರಸ್ವಾಮಿಗಳ ಮಠವಲ್ಲದೆ ಜಿಲ್ಲೆಯ ಬೇರೆ ಬೇರೆ ಸ್ಥಳದಲ್ಲಿರುವ ಶ್ರೀ ರಾಯರ ಮಠದಲ್ಲಿ ಶ್ರೀಗುರು ರಾಘವೇಂದ್ರ ಸ್ವಾಮಿಗಳ 354ನೇ ಆರಾಧನೆಯು ಅತ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿತು. ಶ್ರೀ ಸ್ವಾಮಿಗಳ ಆರಾಧನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪುನೀತರಾದರು.

ಬೆಳಿಗ್ಗೆಯಿಂದಲೇ ಭಕ್ತರು ಶ್ರೀ ರಾಯರ ಮಠಕ್ಕೆ ಆಗಮಿಸಿ ಪೂಜ ಕೈಂಕರ್ಯಗಳಲ್ಲಿ ಭಾಗಿಯಾದರು. ವೇದವ್ಯಾಸ ದೇವರ ಪ್ರತಿಷ್ಠಾಪನೆ, ಅಷ್ಟೋತ್ತರ, ಪಂಚಾಮೃತ, ಮನೆ ಮನೆ ಪಾದಪೂಜೆ, ಮಹಾ ನೈವೇದ್ಯ, ತೀರ್ಥ ಪ್ರಸಾದ, ಸಂಜೆ ಪಲ್ಲಕ್ಕಿ ಸೇವೆ, ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆ ನೆರವೇರಿತು.

ಶ್ರೀಗುರು ರಾಘವೇಂದ್ರ ಸ್ವಾಮಿಗಳ ದ್ವಿತೀಯ ಮೃತ್ತಿಕಾ ವೃಂದಾವನ ಎಂದೇ ಖ್ಯಾತಿ ಪಡೆದಿರುವ ಶಿಕಾರಿಪುರ ತಾಲೂಕಿನ ಉಡುಗಣಿಯಲ್ಲಿ, ತೀರ್ಥಹಳ್ಳಿ ತಾಲುಕಿನ ಕಮ್ಮರಡಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ, ಮತ್ತು ಅದೇ ತಾಲೂಕಿನ ಬಾಳಗಾರು ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀಗಳ ಆರಾಧನೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಭಾಳಗಾರು ಮಠದಲ್ಲಿ ಗುರುರಾಯರಿಗೆ ನೂತನ ರಥ ಸಮರ್ಪಣೆ ಕಾರ್ಯವೂ ನಡೆಯಿತು.

ಆ. ೧೩ರವರೆಗೂ ಶ್ರೀ ರಾಯರ ಆರಾಧನಾ ಮಹೋತ್ಸವದ ಅಂಗವಾಗಿ ವಿವಿಧ ಸ್ಥಳಗಳಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಪವಮಾನ ಹೋಮ, ಅವಭೃತ, ಮಹಾನೈವೇದ್ಯ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಪ್ರಸಿದ್ಧ ಗಾಯಕರಿಂದ ಗೀತಗಾಯನ, ದಾಸ ಸಂಬ್ರಮ ಸಂಗೀತ ಮೊದಲಾದ ಸಾಂಸ್ಕತಿಕ ಕಾರ್ಯಕ್ರಮಗಳೂ ನಡೆಯಲಿವೆ.