ಜಯಕರ್ನಾಟಕ ಸಂಘಟನೆಯ ಜಿಲ್ಲಾ ಮಹಿಳಾ ಘಟಕದ ವತಿಯಿಂದ  ಬೆಳಿಗ್ಗೆ ಬಾಲರಾಜ್ ಅರಸ್ ರಸ್ತೆಯಲ್ಲಿರುವ ಮಥುರಾ ಪ್ಯಾರಾಡೈಸ್ ಸಭಾಂಗಣದಲ್ಲಿ ‘ತವರ ನೆನಪು ಬಾಗಿನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ವರ್ಗದ, ವಿವಿಧ ಧರ್ಮದ ಸುಮಾರು 120ಕ್ಕೂ ಹೆಚ್ಚು ಮಹಿಳೆಯರಿಗೆ ಬಾಗಿನ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಸೂಡಾ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಮಾತನಾಡಿ, ಬಾಂಧವ್ಯಗಳು ಮರೆಯಾಗುತ್ತಿರುವ ಇಂತಹ ಸಂದರ್ಭಗಳಲ್ಲಿ ಸಹೋದರ ಸಂಬಂಧಗಳನ್ನು ಗಟ್ಟಿಗೊಳಿಸುವ ಕೌಟುಂಬಿಕ ಪ್ರೇಮವನ್ನು ಮೆರೆಯುವ ಬಾಗಿನ ಕಾರ್ಯಕ್ರಮ ಅತ್ಯಂತ ಉತ್ತಮ ಕಾರ್ಯಕ್ರಮವಾಗಿದೆ. ಮತ್ತು ಇದು ತವರಿನ ಹೃದಯಸ್ಪರ್ಶವನ್ನು ನೀಡುತ್ತದೆ. ತಲ್ಲಣಗಳೇ ತುಂಬಿರುವ ಇಂತಹ ಸಮಾಜದಲ್ಲಿ ಪ್ರೀತಿಯನ್ನೇ ಹರಿಸುವ ಈ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಎಂದರು.

ಜಯಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಬಿ.ಎನ್. ಜಗದೀಶ್ ಸಾಂಕೇತಿಕವಾಗಿ ಮಹಿಳೆಯರಿಗೆ ಉಡುತುಂಬಿ ಮಾತನಾಡಿ, ಇದೊಂದು ಪುಣ್ಯದ ಕೆಲಸ. ಪುಣ್ಯದ ಜಿಲ್ಲೆಯಲ್ಲಿ ನಡೆಯುತ್ತಿದೆ. ಶಿವಮೊಗ್ಗ ಸಂಸ್ಕತಿ ಮತ್ತು ಸಾಹಿತ್ಯಕ್ಕೆ ಹೆಸರಾಗಿದೆ. ಇಂತಹ ಜಿಲ್ಲೆಯಲ್ಲಿ ಬಾಂಧವ್ಯದ ಬೆಸುಗೆಯಾಗಿ ಬಾಗಿನ ಕಾರ್ಯಕ್ರಮ ಸೇರ್ಪಡೆಗೊಂಡಿದೆ. ಇದು ಕೇವಲ ಸಾಂಕೇತಿಕ ಕಾರ್ಯಕ್ರಮ ಅಲ್ಲ, ಮಹಿಳೆಯರಲ್ಲಿ ಸಂಚಲನ ಮತ್ತು ಸಿಂಚನ ಮೂಡಿಸುವ ಕಾರ್ಯಕ್ರಮ. ತಾಯ್ತನ, ಪ್ರೀತಿ, ಬಾವೈಕ್ಯತೆ, ಮಾನವೀಯತೆ, ಮಲ್ಯಗಳನ್ನು ಬೆಸೆಯುವ ಕಾರ್ಯಕ್ರಮ ಇದಾಗಿದ್ದು, ಇದನ್ನು ಆಯೋಜನೆ ಮಾಡಿದ ಜಿಲ್ಲಾ ಮಹಿಳಾ ಸಂಘಟಿಕರು ವಿಶೇಷವಾಗಿ ಮಹಿಳಾ ಜಿಲ್ಲಾಧ್ಯಕ್ಷ ನಾಜಿಮಾ ಅವರಿಗೆ ಅಭಿನಂದನೆಗೆ ಅರ್ಹರು ಎಂದರು.

ಕಾಂಗ್ರೆಸ್ ಪಕ್ಷದ ಗ್ಯಾರೆಂಟಿ ಯೋಜನೆಗಳ ಜಿಲ್ಲಾ ಸಮಿತಿ ಅಧ್ಯಕ್ಷ ಸಿ.ಎಸ್. ಚಂದ್ರಭೂಪಾಲ್ ಮಾತನಾಡಿ, ಸರ್ಕಾರ ಮಹಿಳೆಯರ ಪರವಾಗಿದೆ. ಗ್ಯಾರೆಂಟಿ ಯೋಜನೆಗಳ ಮೂಲಕ ಆರ್ಥಿಕ ಅಭಿವೃದ್ಧಿಯಾಗುತ್ತಿದೆ. ಇಂತಹ ಕಾರ್ಯಕ್ರಮಗಳ ಕೂಡ ಮಹಿಳೆಯರ ಸಂಘಟನೆಗೆ, ಸೇವೆಗೆ ಸಹಾಯಕವಾಗುತ್ತವೆ ಎಂದರು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷೆ ನಾಜೀಮಾ, ಸೌಗಂದಿಕಾ ರಘುನಾಥ್, ರಾಜ್ಯ ಉಪಾಧ್ಯಕ್ಷರಾದ ಮುನಿಸ್ವಾಮಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಜತ್ ಮಾತನಾಡಿದರು. ಡಿವೈಎಸ್‌ಪಿ ಬಾಬು ಅಂಜನಪ್ಪ, ಖಲೀಂಪಾಷಾ, ರಜತ್, ಅನಿಲ್ ಬೆಂಗಳೂರು, ಮೋಹನ್ ದೇವರಾಜ್, ಭಾರತಿ ರಾಮಕೃಷ್ಣ, ರೇಖಾ, ಜಯಂತಿ, ಮಂಜುಳಾ, ಪುಷ್ಪ, ರೇಖಮ್ಮ, ನಿರ್ಮಲ, ಆಶಾ, ಪ್ರದೀಪ್ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದರು.

ವರದಿ ಮಂಜುನಾಥ್ ಶೆಟ್ಟಿ